ಬೆಂಗಳೂರಿನ ಗಿರಿನಗರ ಇಂಡಿಯನ್ ಬ್ಯಾಂಕ್ನಲ್ಲಿ ಇಟ್ಟಿದ್ದ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ಸಂಬಂಧ ಚಿನ್ನಾಭರಣ ಕಳೆದುಕೊಂಡಿರುವ ಗ್ರಾಹಕರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಗಿರಿನಗರದ ಇಂಡಿಯನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ವಿರುದ್ಧ ಪ್ರಕರಣ ದಾಖಲಾಗಿ ಮೂರು ತಿಂಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳವು ಪ್ರಕರಣದಲ್ಲಿ ಕಿರಣ್ ಬಂಧನವಾಗಿತ್ತು, ಪೊಲೀಸರು ಆತನ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಮೂರೇ ದಿನಕ್ಕೆ ಜಾಮೀನು ಪಡೆದು ಹೊರಬಂದಿದ್ದಾನೆ ಎಂದು ಆರೋಪಿಸಿದ್ದಾರೆ.
ಆರೋಪಿ ಕಿರಣ್ ಕದ್ದ ಚಿನ್ನವನ್ನು ಮುತ್ತೂಟ್ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ. ಅದನ್ನು ರಿಕವರಿ ಮಾಡಲು ಮುಂದಾಗಿದ್ದು, ಆ ಕಂಪನಿಯವರು ಕೋರ್ಟ್ಗೆ ಹೋಗಿದ್ದಾರೆ. ಕಾನೂನಿನ ತೊಡಕು ಉಂಟಾಗಿದ್ದು, ತನಿಖೆ ವಿಳಂಬವಾಗಿಲ್ಲ. ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು ಸದ್ಯದಲ್ಲಿಯೇ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
24 ಮಂದಿ ಗ್ರಾಹಕರು ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ನಾಲ್ಕು ಕೋಟಿ ರು. ಮೌಲ್ಯದ ಚಿನ್ನವನ್ನು ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಹಂತ ಹಂತವಾಗಿ ಕಳ್ಳತನ ಮಾಡಿ ಮುತ್ತೂಟ್ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟು ಆನ್ ಲೈನ್ ಬೆಟ್ಟಿಂಗ್ ಆಡಿ ಮೋಜು ಮಾಡಿದ್ದ. ಗ್ರಾಹಕರು ಅಡಮಾನ ಇಟ್ಟ ಚಿನ್ನ ಪಡೆಯಲು ಬಂದಾಗ ಇದು ಬೆಳಕಿಗೆ ಬಂದಿದೆ. ಫೆ.5 ರಂದು ಬ್ಯಾಂಕ್ ಮ್ಯಾನೇಜರ್ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು.


