Menu

ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ, ಹೈಕಮಾಂಡ್ ಭೇಟಿ ಮಾಹಿತಿ ಬಹಿರಂಗ ಮಾಡಲ್ಲ: ಡಿಕೆ ಶಿವಕುಮಾರ್

“ನಾನು ಪಕ್ಷದ ನಾಯಕರನ್ನು ಭೇಟಿಯಾಗಿದ್ದೇನೆ. ನಾನು ನಮ್ಮ ಕೆಲಸ ಮಾಡುತ್ತಿರುತ್ತೇನೆ. ಆದರೆ, ಯಾರನ್ನು ಭೇಟಿಯಾಗಿರುವೆ ಎಂದು ಹೇಳುವುದಿಲ್ಲ. ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನವದೆಹಲಿಯಲ್ಲಿ  ದೆಹಲಿ ನಾಯಕರಿಗೆ ಚುನಾವಣೆ ಕುರಿತು ವರದಿ ನೀಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಚುನಾವಣೆ ಪ್ರವಾಸ ಮಾಡಿದ್ದೆ. ಎಲ್ಲೆಲ್ಲಿ ಏನಾಗಿದೆ ಎಂದು ನಮ್ಮ ನಾಯಕರಿಗೆ ಮಾಹಿತಿ ನೀಡಬೇಕಿದೆ. ಈ ಮೂರು ರಾಜ್ಯಗಳಲ್ಲಿ ಪ್ರಚಾರ ಮಾಡಲು ಪಕ್ಷ ನನಗೆ ಜವಾಬ್ದಾರಿ ನೀಡಿತ್ತು. ಕರ್ನಾಟಕದಲ್ಲಿ ಚುನಾವಣೆ ಮಾಡುವುದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ. ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ಜವಾಬ್ದಾರಿ ಸ್ಥಾನದಲ್ಲಿರುವ ನಾನು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗುವುದೇ? ನಾನು ಮಾಧ್ಯಮಗಳ‌ ಮುಂದೆ ಮಾತಾಡುವುದಿಲ್ಲ. ನೀವು ನನ್ನಿಂದ ಈ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನವನ್ನೂ ಮಾಡಬೇಡಿ” ಎಂದರು. ಯಾರಿಗಾದರೂ ನೀರು ಕುಡಿಸುತ್ತೀರಾ ಎಂದು ಕೇಳಿದಾಗ, “ಬಿಸಿಲು ಜಾಸ್ತಿ ಇದೆ. ತಮಿಳುನಾಡು, ಪಿರಿಯಾಪಟ್ಟಣಕ್ಕೆ ಹೋದಾಗ ಅಲ್ಲಿ ಬಿಸಿಲು ಹೆಚ್ಚಾಗಿತ್ತು. ಕೇರಳದಲ್ಲಿ ಸ್ವಲ್ಪ ಪರವಾಗಿಲ್ಲ” ಎಂದು ಉತ್ತರಿಸಿದರು.

ಮುಸ್ಲಿಂ ಸಮುದಾಯದ ಆಕ್ರೋಶದ ಬಗ್ಗೆ ಶಾಸಕರು ಹಾಗೂ ಸಚಿವರು ಸಿಎಂ ಭೇಟಿ ಮಾಡಿ ಈ ವಿಚಾರವಾಗಿ ಮಧ್ಯಪ್ರವೇಶಿಸಿ ಎಂದು ಚರ್ಚೆ ಮಾಡಿದ್ದಾರೆ ಎಂದು ಕೇಳಿದಾಗ, “ಪಕ್ಷದ ತಳಮಟ್ಟದಲ್ಲಿ ನಮಗೆ ಕೆಲವು ಮಾಹಿತಿ ಬಂದಿದೆ. ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು” ಎಂದರು.

ಸಿಎಂ ಆಪ್ತ ಸಚಿವರು ಬುಧವಾರ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ ಎಂದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಯಾರು ಯಾರ ಆಪ್ತರು, ಯಾರಿಗೆ ಆಪ್ತರಲ್ಲ ಎಂದು ನನಗೆ ಗೊತ್ತಿಲ್ಲ. ನಾನು ಈ ಸಭೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ತಿಳಿಸಿದರು. ಹಿರಿಯ ಶಾಸಕರು ಸಂಪುಟ ಪುನಾರಚನೆಗೆ ಆಗ್ರಹಿಸಲು ಮತ್ತೆ ದೆಹಲಿ ಪ್ರವಾಸ ಮಾಡಲಿದ್ದಾರೆ ಎಂದು ಕೇಳಿದಾಗ, “ಕಾದು ನೋಡೋಣ” ಎಂದರು.

ವಿವಿಧ ರಾಜ್ಯಗಳ ಚುನಾವಣೆ ಬಗ್ಗೆ ಕೇಳಿದಾಗ, “ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ಕರ್ನಾಟಕದಲ್ಲಿ ಉಪಚುನಾವಣೆ ಮುಗಿಸಿದ್ದೇವೆ. ನಿನ್ನೆ ಕೂಡ ಅಸ್ಸಾಂ ಚುನಾವಣೆ ಸಂಬಂಧ ಜೂಮ್ ಸಭೆ ಮಾಡಿದ್ದೇವೆ. ನಾನು ಮತ್ತೆ ಅಸ್ಸಾಂಗೆ ತೆರಳಲಿದ್ದೇನೆ. ಕೇರಳ ಹಾಗೂ ತಮಿಳುನಾಡಿನಲ್ಲಿ ನಮ್ಮ ಮೈತ್ರಿಕೂಟದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ. ಅಸ್ಸಾಂನಲ್ಲಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರು ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ನಮ್ಮ ಮೈತ್ರಿಕೂಟಕ್ಕೆ ಸಾಕಾರಾತ್ಮಕವಾಗಿದೆ” ಎಂದು ಪ್ರತಿಕ್ರಿಯಿಸಿದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ಹೈದರಾಬಾದ್ ಗೆ ಕುಟುಂಬ ಸಮೇತ ಹೋಗಿದ್ದೆ, ಅಲ್ಲಿಂದ ದೆಹಲಿಗೆ ಬಂದಿರುವೆ. ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ. ಬೆಂಗಳೂರು ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಬೇಕಿದೆ. ಭೇಟಿಗೆ ಸಮಯವಕಾಶ ಕೇಳಿದ್ದೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಬೆಳಗ್ಗೆ 11.45ಕ್ಕೆ ಭೇಟಿಗೆ ಸಮಯ ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.

ಅಲ್ಪಸಂಖ್ಯಾತ ನಾಯಕರ ಅಸಮಧಾನ ವಿಚಾರವಾಗಿ ಕೇಳಿದಾಗ, “ಅವರು ತಮ್ಮ ಭಾವನೆ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪಿಲ್ಲ. ಕೆಲವು ಬಾರಿ ನಾವು ಹೇಳಿರುವುದು ಸರಿ ಇಲ್ಲದಿರಬಹುದು. ಕೆಲವು ಬಾರಿ ಅವರು ಹೇಳಿದ್ದು ಸರಿ ಇಲ್ಲದಿರಬಹುದು. ನಾವೆಲ್ಲರೂ ಕೂತು ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಅಮಾನತು ವಾಪಸ್ ಪಡೆಯಬೇಕು ಎಂಬ ಆಗ್ರಹದ ಬಗ್ಗೆ ಕೇಳಿದಾಗ, “ನಾವು ಯಾರನ್ನು ಅಮಾನತು ಮಾಡಿದ್ದೇವೆ. ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಪತ್ರದಲ್ಲಿ ಏನಿದೆ ಎಂದು ಒಮ್ಮೆ ವಿಶ್ಲೇಷಣೆ ಮಾಡಿ” ಎಂದರು.

Related Posts

Leave a Reply

Your email address will not be published. Required fields are marked *