ಹಿಂದಿ ಸೇರಿದಂತೆ ಎಸ್ಎಸ್ಎಲ್ಸಿ ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆ ಪದ್ಧತಿಯನ್ನೇ ಮುಂದುವರಿಸುವಂತೆ ಸೂಚನೆ ನೀಡಿದೆ.
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಸಂಬಂಧ 2025ರ ಅಕ್ಟೋಬರ್ 28ರಂದು ಸುತ್ತೋಲೆ ಹೊರಡಿಸಲಾಗಿದೆ. ಬಳಿಕ 2026ರ ಮಾರ್ಚ್ 18- ಏಪ್ರಿಲ್ 2 ರವರೆಗೆ ಪರೀಕ್ಷೆ ನಡೆದಿದೆ. ದಿನಪತ್ರಿಕೆ ವರದಿ ಆಧಾರದ ಮೇಲೆ ಅರ್ಜಿ ವಜಾ ಆಗಿದೆ ಎಂದು ವಾದಿಸಿದರು.
ಹಿಂದಿ ತೃತೀಯ ಭಾಷೆ ವಿಚಾರಕ್ಕೆ ಗ್ರೇಡಿಂಗ್ ಸಿಸ್ಟಮ್ ತರಲಾಗಿದೆ. ಹಿಂದಿ ಭಾಷೆಯಿಂದ ವಿದ್ಯಾರ್ಥಿಗಳ ಮೇಲೆ ಹೊರೆ ಜಾಸ್ತಿಯಾಗಿದೆ. ತೃತೀಯ ಭಾಷೆ ಹಿಂದಿಯಲ್ಲಿ ಶೇ.80 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರಿಂದ ಫೇಲ್ ಆಗುತ್ತಿರುವುದಾಗಿ ಹೇಳಿದರು.
ಎಲ್ಲರನ್ನೂ ಪಾಸ್ ಮಾಡುವ ಉದ್ದೇಶ ಸರಿ ಇರಬಹುದು. ಈ ವರ್ಷ ಹೀಗೆ ಇರಲಿ. ಮುಂದಿನ ವರ್ಷದಿಂದ ನೀವು ಇದನ್ನು ಮಾಡಬಹುದು. ಮುಂದಿನ ವರ್ಷ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದ
ನ್ಯಾಯಾಧೀಶರು ಅಂಕಗಳನ್ನು ನೀಡಲು ನಿರ್ದೇಶಿಸಿದರು. ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ. ಏಪ್ರಿಲ್ 10 ರಂದು ಕರಡು ನಿಯಮಗಳನ್ನು ರೂಪಿಸಲಾಗಿದೆ. ಆದೇಶ ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದೆ.


