ಅಮೆರಿಕ ಮತ್ತು ಇರಾನ್ ನಡುವೆ ದ್ವಿತೀಯ ಹಂತದ ಶಾಂತಿ ಮಾತುಕತೆ ಕೂಡ ಫಲಪ್ರದವಾಗುವ ನಿರೀಕ್ಷೆ ಇಲ್ಲದ ಕಾರಣ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಕದನ ವಿರಾಮ ವಿಫಲವಾದರೆ ಬಹಳಷ್ಟು ಬಾಂಬ್‌ಗಳು ಸಿಡಿಯುತ್ತವೆ”ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಇರಾನ್, ಬೆದರಿಕೆಗಳ ನೆರಳಿನಲ್ಲಿ ಮಾತುಕತೆಗಳನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದೆ. ಇರಾನ್ ಸಂಸತ್ ಅಧ್ಯಕ್ಷ ಮಹಮದ್ ಬಗೇರ್ ಗಾಲೀಬಾಫ್ ಅವರು, ಯುದ್ಧ ಮತ್ತೆ ಪ್ರಾರಂಭವಾದರೆ ತಾವು ಹೊಸ ಕಾರ್ಡ್‌ಗಳನ್ನು ಪ್ರದರ್ಶಿಸಲು ಸಿದ್ಧವಿದ್ದೇವೆ ಎಂದಿದ್ದಾರೆ.
ಅಮೆರಿಕ ಇರಾನ್ ಹಡಗನ್ನು ವಶಪಡಿಸಿಕೊಂಡ ಘಟನೆಯಿಂದ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದೆ. ಈ ಪ್ರದೇಶ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದ್ದು, ಎರಡೂ ದೇಶಗಳ ನಡುವಿನ ಸಂಘರ್ಷದ ಕೇಂದ್ರವಾಗಿದೆ.
ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಶಾಂತಿ ಮಾತುಕತೆಗಳಿಗೆ ಅಮೆರಿಕ ಪ್ರತಿನಿಧಿ ತಂಡ ಹಾಜರಾಗುವುದಾಗಿ ತಿಳಿಸಿದರೂ, ಇರಾನ್ ಭಾಗವಹಿಸುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಮೆರಿಕ ತಂಡದ ನೇತೃತ್ವವನ್ನು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಹಿಸಲಿದ್ದು, ಸ್ಟೀವ್ ವಿಟ್‌ಕಾಫ್ ಮತ್ತು ಟ್ರಂಪ್ಅಳಿಯ ಜಾರೆಟ್ ಕುಶಾನರ್ ಕೂಡ ಭಾಗಿಯಾಗಲಿದ್ದಾರೆ.
ಟ್ರಂಪ್ ಅವರ ಕಠಿಣ ಹೇಳಿಕೆಗಳು ಮತ್ತು ಅಮೆರಿಕ ವಿಧಿಸಿರುವ ನಿರ್ಬಂಧಗಳು ಮಾತುಕತೆಗಳಿಗೆ ಅಡ್ಡಿಯಾಗುತ್ತಿವೆ. ಒಪ್ಪಂದದ ಮೂಲ ಅಂಶಗಳಲ್ಲಿ ಕೆಲವು ಒಪ್ಪಿಗೆ ಇದ್ದರೂ, ಸಾರ್ವಜನಿಕವಾಗಿ ನೀಡಲಾಗುತ್ತಿರುವ ತೀವ್ರ ಹೇಳಿಕೆಗಳು ರಾಜತಾಂತ್ರಿಕ ಪ್ರಗತಿಯನ್ನು ಹಾಳುಮಾಡುವ ಅಪಾಯವಿದೆ ಎಂದು ಇರಾನ್ ಹೇಳುತ್ತಿದೆ.
ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವವರೆಗೆ, ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ತೆಗೆದುಹಾಕುವುದಿಲ್ಲ ಎಂದು ಟ್ರಂಪ್ ಬೆದರಿಕೆಯೊಡ್ಡಿದ್ದಾರೆ. ವಾರದ ಹಿಂದೆ ಪ್ರಾರಂಭವಾದ ದಿಗ್ಬಂಧನ “ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸುತ್ತಿದೆ” ಅಮೆರಿಕ ಯುದ್ಧವನ್ನು ಬಹಳಷ್ಟು ಗೆಲ್ಲುತ್ತಿದೆ ಎಂದಿದ್ದರು. ಮಾತುಕತೆಯಲ್ಲಿ ಭಾಗಿಯಾಗಬೇಕೇ ಅಥವಾ ಬೇಡವೇ ಎನ್ನುವ ಕುರಿತು ಇನ್ನೂ ಇರಾನ್ ನಿರ್ಧರಿಸಿಲ್ಲ.


