ಕರ್ನಾಟಕ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ನೇಚರ್ ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಪ್ರತಿ 10 ಚಾರಣಿಗರಿಗೆ ಒಬ್ಬರು ಸ್ಥಳೀಯ ಪ್ರಕೃತಿ ಮಾರ್ಗದರ್ಶಕರಿರುತ್ತಾರೆ. ಎಲ್ಲ ಚಾರಣ ಪಥಗಳಲ್ಲಿ ಒಂದು ಬಾರಿಗೆ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ. ಚಾರಣಕ್ಕೆ ಬರುವವರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದರು.
ಪ್ರತಿಯೊಂದು ಚಾರಣಪಥದಲ್ಲೂ ನೇಚರ್ ಗೈಡ್ ಗಳಿಗೆ ಜಿಪಿಎಸ್ ಅಳವಡಿಸಿದ ವಾಕಿ ಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಪ್ರತಿಯೊಬ್ಬ ಚಾರಣಿಗರ ಮೊಬೈಲ್‌ಗೆ ಚಾರಣಪಥದ ನಕ್ಷೆ ಸಹಿತ ಆಪ್ ಅಳವಡಿಸಲಾಗುವುದು. ಅಕಸ್ಮಾತ್ ಚಾರಣಿಗರು ದಾರಿ ತಪ್ಪಿದರೆ ಅವರ ಶೋಧಕ್ಕೆ ಈ ಆಪ್ ಸಹಕಾರಿಯಾಗಲಿದೆ. ಚಾರಣ ಆರಂಭಕ್ಕೂ ಮುನ್ನ ಮೂಲ ನೆಲೆಯಲ್ಲಿ ಚಾರಣಿಗರಿಗೆ ಸಂಕ್ಷಿಪ್ತವಾಗಿ ಚಾರಣದ ದೂರ, ಅವಧಿ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗುವುದು. ವನ್ಯಜೀವಿಗಳು ಎದುರಾದರೆ ಏನು ಮಾಡಬೇಕು ಎಂದೂ ತಿಳಿಸಲಾಗುವುದು. ಹೆಚ್ಚು ಶಬ್ದ ಮಾಡುವ ಯಾವುದೇ ಸಾಧನಗಳಿಗೆ, ಹರಿತವಾದ ಲೋಹದ ವಸ್ತು, ಆಯುಧಗಳನ್ನು ತೆಗೆದುಕೊಂಡು ಹೋಗಲು ಮತ್ತು ಕ್ಯಾಂಪ್ ಫೈರ್ ಮಾಡಲು ಚಾರಣ ಪಥದಲ್ಲಿ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಚಾರಣಿಗರಿಗೆ ಮೂಲ ನೆಲೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಚಾರಣ ಪಥದಲ್ಲಿ ಬೇಸ್ ಕ್ಯಾಂಪ್ ಗೆ ಹೋಗುವ ಮಾರ್ಗಸೂಚಿ, ಬಾಣದಾಕಾರದ ಗುರುತು ಹಾಕಲಾಗುವುದು. ಮಾರ್ಗಮಧ್ಯೆ ವಿರಮಿಸಿಕೊಳ್ಳಲು ವಿಶ್ರಾಂತಿ ತಾಣ ಮಾಡಲಾಗುವುದು. ಗೈಡ್ಗಳು ಯಾವುದೇ ಚಾರಣಿಗ ತಮಗಿಂತ ಮುಂದೆ ಹೋಗಿಲ್ಲ ಹಾಗೂ ಹಿಂದೆ ಉಳಿದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬೇಸ್ ಕ್ಯಾಂಪ್, ವಿಶಾಂತಿ ತಾಣಗಳಲ್ಲಿ ಕಡ್ಡಾಯವಾಗಿ ಚಾರಣಿಗರ ಎಣಿಕೆ ಮಾಡಬೇಕು. ಪ್ರತಿ ಅರ್ಧಗಂಟೆಗೊಮ್ಮೆ ವಾಕಿ ಟಾಕಿ ಮೂಲಕ ಬೇಸ್ ಕ್ಯಾಂಪ್ ಸಂವಹನ ನಡೆಸಬೇಕು. ಚಾರಣ ಆರಂಭವಾದ ಒಂದು ಗಂಟೆಯೊಳಗೆ ವಾಕಿ ಟಾಕಿ ಸಂವಹನ ಗೈಡ್ ಕಡೆಯಿಂದ ನಡೆಯದಿದ್ದರೆ ಬೇಸ್ ಕ್ಯಾಂಪ್ ಸಿಬ್ಬಂದಿಯೇ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಪಾಲಕರ, ಪೋಷಕರ ಅನುಮತಿ ಪತ್ರ ಕಡ್ಡಾಯ. ಹಿರಿಯ ನಾಗರಿಕರು ಚಾರಣ ಕೈಗೊಳ್ಳಲು ದೈಹಿಕ ಸಾಮರ್ಥ್ಯ ಮತ್ತು ಸದೃಢತೆಯ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ ಎಂದರು. ಯಾವುದೇ ಚಾರಣಿಗರಿಗೆ ಆರೋಗ್ಯ ಸಮಸ್ಯೆ ಆದರೆ ಆರೈಕೆಗಾಗಿ ಗೈಡ್ ತಮ್ಮ ಜೊತೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಫ್ಲಾಶ್ ಬಳಸಿ ಫೋಟೋ ತೆಗೆಯುವುದನ್ನು, ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಕ್ಯಾರಿ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ತ್ಯಾಜ್ಯವನ್ನು ಚಾರಣಿಗರು ತಂದು ಬೇಸ್ ಕ್ಯಾಂಪ್ ನಲ್ಲೇ ವಿಲೇವಾರಿ ಮಾಡಬೇಕು ಎಂದರು.
ಅರಣ್ಯ ಇಲಾಖೆ ವ್ಯಾಪ್ತಿಯ ಚಾರಣ ಪಥಗಳ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಆಗುವಂತೆ ಎಲ್ಲ ಚಾರಣಪಥಗಳನ್ನೂ https://aranyavihaara.karnataka.gov.in/ ಅಂತರ್ಜಾಲ ತಾಣದಲ್ಲಿ ಸೇರ್ಪಡೆ ಮಾಡುವಂತೆ ಸೂಚನೆ ನೀಡಿರುವುದಾಗಿಯೂ ಖಂಡ್ರೆ ತಿಳಿಸಿದರು.


