ಇರಾನ್ ತನ್ನಲ್ಲಿರುವ ಯುರೇನಿಯಂ ಹಸ್ತಾಂತರಿಸಲು ಒಪ್ಪಿಕೊಂಡಿದೆ, ಯುದ್ಧ ಕೊನೆಗೊಳ್ಳುವ ಸಮಯ ಹತ್ತಿರದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ವೈಟ್‌ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ನಮಗೆ ಯುರೇನಿಯಂ ಹಿಂತಿರುಗಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ.
ನಾವು ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ. ಅಮೆರಿಕ ಮತ್ತು ಇರಾನ್ ಅತ್ಯಂತ ಯಶಸ್ವಿ ಮಾತುಕತೆ ನಡೆಸುತ್ತಿವೆ. ಒಪ್ಪಂದವಾದರೆ ತೈಲ ಸಮಸ್ಯೆ ಬಗೆಹರಿಯುತ್ತದೆ. ಹರ್ಮುಜ್ ಜಲಸಂಧಿ ಮುಕ್ತವಾಗಿ ಎಲ್ಲವೂ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ. ಕಳೆದ ವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬರಲು ವಿಫಲವಾಗಿದ್ದವು. ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬ ಅಮೆರಿಕದ ಷರತ್ತನ್ನು ಒಪ್ಪಿಕೊಳ್ಳಲು ಇರಾನ್ ನಿರಾಕರಿಸಿತ್ತು.
ಇರಾನ್ ಮತ್ತು ಅಮೆರಿಕದ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಇಸ್ರೇಲ್ ಮತ್ತು ಲೆಬನಾನ್ ಯುದ್ಧವನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಬಳಿಕ 10 ದಿನಗಳ ಕದನ ವಿರಾಮಕ್ಕೆ ಸಹಮತ ವ್ಯಕ್ತವಾಗಿದೆ. ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದೆ. ಕದನ ವಿರಾಮ ಒಪ್ಪಂದಕ್ಕೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. 34 ವರ್ಷಗಳ ಬಳಿಕ ಮೊದಲ ಬಾರಿಗೆ ಲೆಬನಾನ್ ಮತ್ತು ಇಸ್ರೇಲ್ ಪ್ರತಿನಿಧಿಗಳು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರೊಂದಿಗೆ ಶಾಶ್ವತ ಕದನ ವಿರಾಮಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.


