Menu

ಹರ್ಮುಜ್ ಜಲಸಂಧಿಗೆ ಅಮೆರಿಕ ನಿರ್ಬಂಧ ಕೈ ಬಿಡಲು ಸೌದಿ ಅರೇಬಿಯಾ ಒತ್ತಾಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಎಲ್ಲ ಬಂದರುಗಳ ಮೇಲೆ ದಿಗ್ಭಂಧನ ವಿಧಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಅಮೆರಿಕದ ಮಿತ್ರ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಹೇಳಿದೆ.

ಸೌದಿ ಅರೇಬಿಯಾ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಹರ್ಮುಜ್ ಜಲಸಂಧಿ ಮೇಲಿನ ದಿಗ್ಬಂಧನವನ್ನು ಕೈಬಿಟ್ಟು ಮಾತುಕತೆಯತ್ತ ಮರಳಲು ಒತ್ತಡ ಹೇರುತ್ತಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಅಮೆರಿಕ ಇರಾನಿನ ಬಂದರುಗಳ ಮೇಲೆ ದಿಗ್ಬಂಧನ ವಿಧಿಸಲು ಮುಂದಾದರೆ, ಇರಾನ್ ಜಾಗತಿಕ ವ್ಯಾಪಾರ ಮತ್ತು ತೈಲ ಸಾಗಣೆಗೆ ಬಳಸುವ ಇತರ ಪ್ರಮುಖ ಸಮುದ್ರ ಮಾರ್ಗಗಳನ್ನು ಗುರಿಯಾಗಿಸುವ ಅಥವಾ ಅಡ್ಡಿಪಡಿಸುವ ಸಾಧ್ಯತೆ ಬಗ್ಗೆ ಸೌದಿ ಅರೇಬಿಯಾ ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ.

ಜಲಸಂಧಿ ನಿರ್ಬಂಧಿಸುವ ಅಮೆರಿಕದ ನಿರ್ಧಾರವು ಈಗಾಗಲೇ ದುರ್ಬಲಗೊಂಡಿರುವ ಇರಾನ್‌ನ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಿಸುವ ಗುರಿ ಹೊಂದಿದೆ. ಆದರೆ ಇರಾನ್ ಬಾಬ್ ಅಲ್-ಮಂಡೇಬ್ ಮುಚ್ಚುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಸೌದಿ ಅರೇಬಿಯಾವು ಅಮೆರಿಕಕ್ಕೆ ತಿಳಿಸಿದೆ.

ಬಾಬ್ ಅಲ್-ಮಂಡೇಬ್ ಜಲಸಂಧಿಯು ಯೆಮೆನ್ ಬಳಿಯ ಒಂದು ಪ್ರಮುಖ ಸಮುದ್ರ ಮಾರ್ಗವಾಗಿದ್ದು, ಇದು ಕೆಂಪು ಸಮುದ್ರವನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಅಲ್ಲಿನ ಕರಾವಳಿಯು ಯೆಮನ್‌ನಲ್ಲಿರುವ ಇರಾನ್‌ನ ಹೌತಿ ಮಿತ್ರರಾಷ್ಟ್ರಗಳಿಂದ ನಿಯಂತ್ರಿಸಲ್ಪಡುತ್ತದೆ. ಗಾಜಾ ಯುದ್ಧದ ಸಮಯದಲ್ಲಿ ಹೌತಿಗಳು ಈ ಜಲಮಾರ್ಗದಲ್ಲಿ ದಾಳಿ ಮಾಡಿ ಸಾಗಣೆಗೆ ಅಡ್ಡಿಯುಂಟು ಮಾಡಿದರು. ಈಗ ಇರಾನ್ ಮತ್ತೆ ಇದನ್ನು ಮುಚ್ಚಲು ಈ ಗುಂಪಿನ ಮೇಲೆ ಒತ್ತಡ ಹೇರುತ್ತಿದೆ ಎಂದು ಅರಬ್ ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್‌ನ ಸರ್ವೋಚ್ಚ ನಾಯಕನ ವಿದೇಶಾಂಗ ನೀತಿ ಸಲಹೆಗಾರ ಅಲಿ ಅಕ್ಬರ್ ವೆಲಾಯತಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಇರಾನ್‌ ಬಾಬ್ ಅಲ್-ಮಂಡೇಬ್ ಅನ್ನು ‘ಹರ್ಮುಜ್ ಅನ್ನು ನೋಡುವಂತೆಯೇ ನೋಡುತ್ತದೆ’ ಮತ್ತು ಶ್ವೇತಭವನವು ತನ್ನ ಮೂರ್ಖ ತಪ್ಪುಗಳನ್ನು ಪುನರಾವರ್ತಿಸಿದರೆ ಜಾಗತಿಕ ಇಂಧನ ಮತ್ತು ವ್ಯಾಪಾರದ ಹರಿವನ್ನು ಅಡ್ಡಿಪಡಿಸಬಹುದು ಎಂದು ಅದು ಬೇಗನೆ ಅರಿತುಕೊಳ್ಳುತ್ತದೆ ಎಂದಿದ್ದಾರೆ.

ಹೈದರಾಬಾದ್‌ನಲ್ಲಿರುವ ಇರಾನ್‌ನ ದೂತಾವಾಸವು ಹರ್ಮುಜ್ ಜಲಸಂಧಿ ಸಾಮಾಜಿಕ ಮಾಧ್ಯಮವಲ್ಲ. ಯಾರಾದರೂ ನಿಮ್ಮನ್ನು ನಿರ್ಬಂಧಿಸಿದರೆ ನೀವು ಅವರನ್ನು ಮತ್ತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಿದೆ.

Related Posts

Leave a Reply

Your email address will not be published. Required fields are marked *