ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್ಸಿ ನಸೀರ್ ಅಹ್ಮದ್ ರಾಜೀನಾಮೆ ನೀಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪತ್ರವನ್ನು ಸಿಎಂ ಸಿದ್ದರಾಮಯ್ಯನವರಿಗೆ ಕಳಿಸಿದ್ದಾರೆ.
ಏ.13 ರಂದು ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ನಜೀರ್ ಅಹ್ಮದ್ಗೆ ಡೆಡ್ಲೈನ್ ನೀಡಿ ಸಂಜೆಯೊಳಗೆ ರಾಜೀನಾಮೆ ನೀಡಬೇಕೆಂದು ಸೂಚಿಸಿದ್ದರು. ಸಂಜೆಯೊಳಗೆ ನಜೀರ್ ಅಹಮ್ಮದ್ ರಾಜೀನಾಮೆ ಕೊಡದಿದ್ದರೆ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸುವುದಾಗಿ ತಿಳಿಸಿದ್ದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಸಮರ್ಥ್ ಅವರನ್ನು ಸೋಲಿಸಲು ವಿರೋಧ ಪಕ್ಷದ ಮುಖಂಡರ ಜೊತೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದಾರೆ ಎಂದು ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಆರೋಪದ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅಲ್ಪಸಂಖ್ಯಾತ ಘಟಕವನ್ನು ವಿಸರ್ಜನೆ ಮಾಡಲಾಗಿದೆ. ನಸೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯ ಆಪ್ತ ವಲಯಲ್ಲಿ ಗುರುತಿಸಿಕೊಂಡವರು. ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ.
ದಾವಣಗೆರೆ ದಕ್ಷಿಣದಲ್ಲಿ ಬಂಡಾಯ ಎದ್ದಾಗ ಅದನ್ನು ಶಮನ ಮಾಡುವ ಜವಾಬ್ದಾರಿಯನ್ನು ಆರಂಭದಲ್ಲಿ ನಸೀರ್ ಅಹ್ಮದ್ ಅವರಿಗೆ ನೀಡಲಾಗಿತ್ತು. ಸಾದಿಕ್ ಪೈಲ್ವಾನ್ ಬಂಡಾಯ ತೀವ್ರಗೊಂಡಿದ್ದರೆ ಪಕ್ಷಕ್ಕೆ ಹಿನ್ನಡೆ ಆಗುತ್ತಿತ್ತು. ನಸೀರ್ ಅಹ್ಮದ್ ಅವರಿಗೆ ಪೈಲ್ವಾನ್ ಮನವೊಲಿಸುವಂತೆ ಸೂಚಿಸಲಾಗಿತ್ತು. ಒಪ್ಪಿ ದಾವಣಗೆರೆ ತೆರಳಲು ಮುಂದಾಗಿದ್ದರು. ಬಳಿಕ ಹಿಂದೇಟು ಹಾಕಿದರು, ಪ್ರಚಾರದಲ್ಲೂ ತೊಡಗಿಸಿಕೊಳ್ಳದೆ ಅಂತರ ಕಾಯ್ದುಕೊಂಡರು ಎಂಬ ಮಾಹಿತಿ ಇದೆ.


