ಮುಂಬೈನಲ್ಲಿ ಭಾನುವಾರ ನಿಧನರಾದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಸೋಮವಾರ (ಇಂದು) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಮೂರರವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
92 ವರ್ಷದ ಆಶಾ ಭೋಸ್ಲೆ ಅನಾರೋಗ್ಯದಿಂದಾಗಿ ಏಪ್ರಿಲ್ 11ರ ಶನಿವಾರ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದು, ಅಂಗಾಗ ವೈಫಲ್ಯದಿಂದ ಭಾನುವಾರ ನಿಧನರಾದರು. ಹಾಡುತ್ತಾ ಹಾಡುತ್ತಲೇ ನಾನು ಹೊರಟು ಹೋಗಿಬಿಡಬೇಕು. ಇದೇ ನನ್ನ ಆಸೆ. ನನಗೆ ಈಗ ಕಲಿಯುವುದಕ್ಕೆ ಏನೂ ಇಲ್ಲ. ಗಾಯನವೇ ನನ್ನ ಜೀವನ. ನಾನು ಚಿಕ್ಕವಳಿದ್ದಾಗಿನಿಂದ ಹಾಡಿದ್ದೇನೆ. ಮೂರು ವರ್ಷ ಅಪ್ಪನ ಹತ್ತಿರ ಕ್ಲಾಸಿಕಲ್ ಕಲಿತೆ. ಹಾಗೇ ಪೂರ್ತಿ ಬದುಕು ನಡೆದು ಹೋಯ್ತು. ಹಾಡುತ್ತಾ ಹಾಡುತ್ತಲೇ ನಾನು ಹೊರಟು ಹೋಗಬೇಕು. ಅದರಲ್ಲೇ ನನಗೆ ಹೆಚ್ಚು ಖುಷಿ ಸಿಗುತ್ತದೆ ಎಂದು ಆಶಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಆಶಾ ಭೋಸ್ಲೆ ಹಿಂದಿ, ಮರಾಠಿ, ಬಂಗಾಳಿ, ತಮಿಳು, ಮಲಯಾಳಂ, ಕನ್ನಡ, ಇಂಗ್ಲಿಷ್, ರಷ್ಯನ್ ಸಹಿತ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. 8 ದಶಕ ಕಾಲ, ಶಾಸ್ತ್ರೀಯ, ಗಜಲ್, ಕ್ಯಾಬರೆ ಹಾಗೂ ಪಾಪ್ ಸೇರಿದಂತೆ ನಾನಾ ಸಂಗೀತ ಶೈಲಿಯಲ್ಲಿ ಹಾಡಿದ್ದಾರೆ. 2011ರಲ್ಲಿ, ಆಶಾ ಭೋಸ್ಲೆ 11,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ಬರೆದಿದ್ದರು. ಕೆಲವು ಮೂಲಗಳ ಪ್ರಕಾರ, ಅವರು ಹಾಡಿದ ಹಾಡು 12,000 ದಾಟಿರಬಹುದು. ಆಶಾ ಭೋಸ್ಲೆ ಅವರ ಸಾಧನೆಗೆ 2000ರಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿತ್ತು.


