ಮದುವೆ ವಯಸ್ಸು ಮೀರಿದರೂ ಹೆಣ್ಣು ಸಿಗುತ್ತಿಲ್ಲ ಎಂದು ಖಿನ್ನತೆಗೊಳಗಾಗಿದ್ದ ಯುವಕನೊಬ್ಬ ಕುಡಿದ ಮತ್ತಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಕಡೂರು ತಾಲೂಕಿನ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿ ಕುಮಾರ್ (26) ಮೃತಪಟ್ಟವರು. ಕಡೂರು ತಾಲೂಕಿನ ಬೋರಗಾನಹಳ್ಳಿಯ ಪರಮೇಶ್ವರಪ್ಪ ಎಂಬವರ ತೋಟದಲ್ಲಿ ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದರು. ರಾಮನವಮಿ ಹಬ್ಬಕ್ಕೆ ಊರಿಗೆ ಹೋಗಿದ್ದಾಗ ಕುಮಾರ್, ಮದುವೆ ಮಾಡುವಂತೆ ಪೋಷಕರಲ್ಲಿ ಕೇಳಿದ್ದರು. ಪೋಷಕರು ಮೊದಲು ಇಬ್ಬರು ಅಣ್ಣಂದಿರ ಮದುವೆಯಾಗಲಿ, ನಂತರ ನಿನಗೆ ಮದುವೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅಲ್ಲಿಯವರೆಗೆ ಕುರಿ ಮೇಯಿಸಿಕೊಂಡು ಇರುವಂತೆ ಹೇಳಿ ಮಗನನ್ನು ವಾಪಸ್ ಕಳುಹಿಸಿದ್ದರು.
ತನಗೆ ಮದುವೆಯಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದ ಕುಮಾರ್‌ಜಿಗುಪ್ಸೆಗೆ ಒಳಗಾಗಿದ್ದ. ಇದೇ ವಿಚಾರವಾಗಿ ನೊಂದು ಕುಡಿದ ಮತ್ತಿನಲ್ಲಿ ತೋಟದ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


