Menu

ರೀಲ್ಸ್‌ ವ್ಯಸನ: ವೃದ್ಧರನ್ನು ಕೊರಿಯರ್‌ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಕುಟುಂಬ

ರೀಲ್ಸ್​​ ಮಾಡುವ ವ್ಯಸನಕ್ಕೆ ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೂರಿಯರ್ ಮಾಡಲು ಕುಟುಂಬವೊಂದು ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ, ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಐವರು ಮಂಗಳವಾರ ವೈಯ್ಯಾಲಿಕಾವಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೂರಿಯರ್ ಕಚೇರಿಗೆ ದೊಡ್ಡ ಪ್ಯಾಕೇಜ್‌ ಹೊತ್ತು ತಂದಿದ್ದಾರೆ.

ಇಷ್ಟು ದೊಡ್ಡ ಚೀಲ ನೋಡಿ ಒಳಗೆ ಏನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದ್ದು, ಕುಟುಂಬದವರು ಉತ್ತರಿಸಿಲ್ಲ. ಅನುಮಾನಗೊಂಡ ಸಿಬ್ಬಂದಿ ಪ್ಯಾಕೇಜ್ ಓಪನ್​​ ಮಾಡಿ ನೋಡಿ ಬೆಚ್ಚಿಬಿದ್ದಿದ್ದಾರೆ. ವೃದ್ಧ ವ್ಯಕ್ತಿ ಚೀಲದಲ್ಲಿ ಇದ್ದು, ಅವರು ಕೊರಿಯರ್​​ ಮಾಡಲು ಬಂದಿದ್ದ ಕುಟುಂಬದ ಮಹಿಳೆಯ ತಂದೆ ಎಂಬುದು ತಿಳಿದುಬಂದಿದೆ. ಅವರು ಚೀಲದಲ್ಲಿ ಉಸಿರಾಡಲು ಕಷ್ಟ ಪಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಯುಗಾದಿ ಮತ್ತು ರಂಜಾನ್​​ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳು ಸಿಗದ ಸಮಸ್ಯೆಯನ್ನು ತೋರಿಸಲು ಮನುಷ್ಯನನ್ನೇ ಕೂರಿಯರ್ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಮಾಡಲು ಈ ರೀತಿ ಮಾಡಿದ್ದಾಗಿ ಕುಟುಂಬದವರು ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಇವರ ಕೃತ್ಯಕ್ಕೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರೂ ಇಷ್ಟು ದೂರ ಬಂದು ಕಷ್ಟಪಟ್ಟಿದ್ದೇವೆ. ದಯವಿಟ್ಟು ಪಾರ್ಸೆಲ್ ತೆಗೆದುಕೊಳ್ಳಿ ಎಂದು ಮೊಂಡುತನ ಪ್ರದರ್ಶಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕುಟುಂಬವನ್ನು ಠಾಣೆಗೆ ಕರೆದೊಯ್ದಿದ್ದಾರೆ. ತಮ್ಮದು ತಪ್ಪಾಯ್ತು ಎಂದು ಕುಟುಂಬಸ್ಥರು ಕ್ಷಮೆಯಾಚನೆ ಮಾಡಿದ ವೀಡಿಯೊ ದಾಖಲಿಸಿಕೊಂಡ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *