ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಾಟ ಮಾಡುವ ಜಾಹೀರಾತು ಹೇಗೆ ಸಮಾಜಮುಖಿ ಆದೀತು ? ಇದೊಂದು ದಿವಾಳಿತನದ ಮಾರಾಟ ನಿಯಮ. ಜನತೆಯನ್ನು ದಿಕ್ಕು ತಪ್ಪಿಸುವಂತಹ ಈ ಬ್ಲಾಂಕೆಟ್ ಸೇಲ್ ನಿಯಮ ಇಡೀ ದೇಶಕ್ಕೆ ಮಾರಕ. ಈ ದಿಶೆಯಲ್ಲಿ ಫ್ಲಿಫ್‌ಕಾರ್ಟ್ ನೀಡಿರುವ ಸಮಜಾಯಿಷಿ ಅರ್ಥಹೀನ ಮತ್ತು ಅತಾರ್ಕಿಕ.
ಫ್ಲಿಫ್‌ಕಾರ್ಡ್ ಈಗ ನಂದಿನಿ ಹಾಲಿನ ದರದ ಮೇಲೆ ಚೆಲ್ಲಾಟ ಆಡಿದೆ ! ಜಾಗತಿಕ ಮಾರುಕಟ್ಟೆಯ ಅರಾಜಕತೆಗೆ ಇದೊಂದು ಸ್ಪಷ್ಟ ಉದಾಹರಣೆ. ಇಂತಹ ಮಾರಾಟ ಏಜೆನ್ಸಿಯನ್ನು ನಿಯಂತ್ರಿಸಲು ಸರ್ಕಾರದ ಬಳಿ ಸೂಕ್ತ ಕಾನೂನುಗಳಿಲ್ಲವೇ ? ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಾಟ ಮಾಡುವ ಜಾಹೀರಾತು ಹೇಗೆ ಸಮಾಜಮುಖಿ ? ಇದೊಂದು ದಿವಾಳಿತನದ ಮಾರಾಟ ನಿಯಮ ಎನ್ನದೆ ವಿಧಿಯಿಲ್ಲ. ಜನತೆಯನ್ನು ದಿಕ್ಕು ತಪ್ಪಿಸುವಂತಹ ಈ ಬ್ಲಾಂಕೆಟ್ ಸೇಲ್ ನಿಯಮ ಇಡೀ ದೇಶಕ್ಕೆ ಮಾರಕ.
ಈ ದಿಶೆಯಲ್ಲಿ ಫ್ಳಿಪ್‌ಕಾರ್ಟ್ ನೀಡಿರುವ ಸಮಜಾಯಿಷಿ ಅರ್ಥಹೀನ ಮತ್ತು ಅತಾರ್ಕಿಕ. ತನ್ನ ಬಳಿಯಿರುವ ಉತ್ಪನ್ನವನ್ನು ಮಾರಲು ಈ ಏಜೆನ್ಸಿ ಬಳಸುವ ಗಿಮಿಕ್‌ಗೆ ದೇಶದ ಕಾನೂನಿನಡಿ ಸಮ್ಮತಿ ಎಂದರೆ ಇದಕ್ಕಿಂತ ಕೆಟ್ಟ ನಿಯಮ ಬೇರೊಂದಿಲ್ಲ ಎನ್ನಬೇಕಾದೀತು. ಇದರಿಂದ ವ್ಯಾಪಾರಿಗೆ ಮತ್ತು ಏಜೆನ್ಸಿಗೆ ಲಾಭವೇ ವಿನಹ, ಗ್ರಾಹಕ ಮತ್ತು ಹಾಲು ಪೂರೈಸುವ ಉತ್ಪಾದಕನಿಗೆ ಪರೋಕ್ಷವಾಗಿ ಮೋಸ ಮತ್ತು ಅನ್ಯಾಯವಾಗುವುದು ಖಂಡಿತ. ಉತ್ಪಾದನೆ ಮತ್ತು ಮಾರಾಟದ ವೇಳೆ ನೀತಿ ನಿಯಮಾವಳಿ ಇರಬೇಕು. ಈ ದೇಶದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿ ಮತ್ತು ಅವುಗಳಿಗೆ ಅನುಗುಣವಾಗಿ ಕಾನೂನುಗಳನ್ನು ರಚಿಸುವ ಸರ್ಕಾರ, ಗ್ರಾಹಕನ ಹಿತಾಸಕ್ತಿಯನ್ನು ಗಾಳಿಗೆ ತೂರುವುದು ಪರಮ ಅನ್ಯಾಯ. ಉತ್ಪಾದಕ, ಮಾರಾಟಗಾರ, ಮಾರಾಟ ಮಳಿಗೆ ಮತ್ತು ಮಾರುಕಟ್ಟೆ ಇವುಗಳ ನಡುವೆ ಸಾಮ್ಯ ಮತ್ತು ಸಮತೋಲನ ಇರಬೇಕಲ್ಲವೇ ? ಹಾಗಿಲ್ಲದಿದ್ದರೆ ಇದು ಫೇರ್‌ಟ್ರೇಡ್ ಹೇಗಾದೀತು ? ಯಾವುದೋ ಒಂದು ವಿದೇಶಿ ಕಂಪನಿ ಈ ದೇಶದಲ್ಲಿ ಸಿಗುವ ಹಾಲುಮತ್ತು ಮೊಸರಿಗೆ ತನ್ನದೇ ಆದ ದರ ನಿಗದಿಪಡಿಸಿ ತನ್ನ ಅನುಕೂಲಕ್ಕೆ ತಕ್ಕಂತೆ ಮತ್ತು ತನ್ನ ವ್ಯಾಪಾರಕ್ಕೆ ಅನುಗುಣವಾಗಿ ಮಾರಾಟ ಮಾಡಲು ಅನುಮತಿ ನೀಡಿದವರು ಯಾರು ?
ಒಂದು ವೇಳೆ ಇಂತಹ ಕಾನೂನು ಇದೆ ಎನ್ನುವುದಾದರೆ ಜನತೆ ಇಂದು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಆದೀತು. ವಿವಿಧ ಉತ್ಪನ್ನಗಳ ಮಾರಾಟದ ಲೈಸನ್ಸ್ ಪಡೆದ ವಿದೇಶಿ ಕಂಪನಿ ಇತ್ತ ಗ್ರಾಹಕ ಮತ್ತು ಅತ್ತ ಉತ್ಪಾದಕ ಅಲ್ಲದೆ ಸಂಬಂಧಿತ ಸರ್ಕಾರಗಳ ಕಣ್ಣಿಗೆ ಮಣ್ಣೆರಚಿ ತನ್ನ ಬೇಳೆ ಬೇಯಿಸಿಕೊಳ್ಳುವ ವ್ಯಾಪಾರಿಕ ಕಲೆ, ನೂರಾರು ವರ್ಷಗಳ ಕಾಲ ಈ ದೇಶವನ್ನು ಆಳಿ ಭಾರತೀಯರನ್ನು ದೋಚಿ ದಿವಾಳಿ ಎಬ್ಬಿಸಿದ ಈಸ್ಟ್ ಇಂಡಿಯಾ ಕಂಪನಿಯ ವಂಚನೆಗಿಂತಲೂ ಹೆಚ್ಚು ದಗಲಬಾಜಿತನದಿಂದ ಕೂಡಿದೆ. ರಾಜ್ಯದಲ್ಲಿ ದಾಖಲೆಮಟ್ಟದ ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗುತ್ತಿದೆ. ಇದನ್ನು ಅತಿ ಕಡಿಮೆ ಬೆಲೆಗೆ ಉತ್ಪಾದಕರಿಂದ ಖರೀದಿಸಿ ಒಂದು ರೂಪಾಯಿಗೆ ಒಂದು ಲೀಟರ್ ಅಂತಹ ಆಫರ್ ನೀಡಿದರೆ ಇದು ಮಾರಾಟದ ವ್ಯವಸ್ಥೆಯನ್ನೇ ನಿರ್ನಾಮಗೊಳಿಸುವಂತಹ ವ್ಯಾಪಾರವಲ್ಲದೆ ಮತ್ತೇನೂ ಆಗಿಲ್ಲ. ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡುವ ವ್ಯಾಪಾರಿ ತದನಂತರ ವಿಧಿಸುವ ಸೇವಾ ಶುಲ್ಕ, ಸಾಗಣೆ ಶುಲ್ಕ ಮಾರಾಟ ಶುಲ್ಕ ಇತ್ಯಾದಿಗಳೆಲ್ಲವೂ ಸೇರಿದರೆ ಮಾರಾಟಗಾರ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನಿಜಕ್ಕೂ ನೀಡಲು ಸಾಧ್ಯವೇ ಎಂಬುದನ್ನು ಜನತೆ ಇಂದು ಗಂಭಿರವಾಗಿ ಆಲೋಚಿಸಬೇಕಿದೆ


