Menu

ಮುತ್ತೋಡಿ ಅರಣ್ಯದಲ್ಲಿ ವ್ಯಾಪಿಸುತ್ತಿರುವ ಕಾಡ್ಗಿಚ್ಚು: ಜೀವ ಸಂಕುಲಕ್ಕೆ ಸಂಚಕಾರ

ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಳೆದ ಎರಡು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಲ್ಲಿನ ಜೀವ ಸಂಕುಲಕ್ಕೆ ಸಂಚಕಾರ ಬಂದಿದೆ. ಅಪರೂಪದ ಅರಣ್ಯ ಸಂಪತ್ತು, ಜೀವರಾಶಿ ಬೆಂಕಿಗೆ ಆಹುತಿಯಾಗುವ ಅಪಾಯ ಎದುರಾಗಿದೆ.

ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿದ್ದು, ಮುತ್ತೋಡಿ ಅರಣ್ಯ ವ್ಯಾಪ್ತಿಯ ಎಮ್ರಹಳ್ಳಿ ಮತ್ತು ಹೊಸಕಾನ್ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಿಸಿಲ ಬೇಗೆಗೆ ತರಗೆಲೆಗಳು ಮತ್ತು ಹುಲ್ಲಿನಿಂದಾಗಿ ಕ್ಷಣಾರ್ಧದಲ್ಲೇ ಕಿಲೋ ಮೀಟರ್‌ಗಳಷ್ಟು ದೂರ ಬೆಂಕಿ ವ್ಯಾಪಿಸುತ್ತಿದೆ.

ಕಾಡಿಗೆ ಬೆಂಕಿ ಬೀಳುತ್ತಿದ್ದಂತೆ ಪ್ರಾಣಿಗಳು ತಪ್ಪಿಸಿಕೊಳ್ಳಲು ಕಾಡಂಚಿನ ಗ್ರಾಮ ಹಾಗೂ ತೋಟಗಳಿಗೆ ಓಡಿರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಅರಣ್ಯ ಇಲಾಖೆಯಲ್ಲಿ ವಾಚರ್‌ಗಳ ಕೊರತೆ ಇರುವುದರಿಂದ ಬೆಂಕಿಯನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ ಎಂದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸಿಗೆಯಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯ ಇಲಾಖೆ ಫೈರ್ ಲೈನ್‌ಗಳನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುತ್ತೋಡಿ ಭಾಗದ ಜೇನುಕಲ್ಲುಗಿರಿ, ಕಾಗೆಮನೆಗಿರಿ ಹಾಗೂ ಗೆಸ್ಟ್ ಹೌಸ್ ರಸ್ತೆಯ ಭಾಗಗಳಲ್ಲಿ ಫೈರ್ ಲೈನ್ ಮಾಡದಿರುವುದು ಬೆಂಕಿ ವೇಗವಾಗಿ ಹರಡುವುದಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಕ್ಷಣವೇ ಹೆಚ್ಚಿನ ಸಿಬ್ಬಂದಿ ಹಾಗೂ ಅಗ್ನಿ ನಿಯಂತ್ರಣ ಸಾಧನಗಳನ್ನು ನಿಯೋಜಿಸಿ ಕಾಡ್ಗಿಚ್ಚನ್ನು ನಂದಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *