ಮೈಕ್ರೋ ಫೈನಾನ್ಸ್ ನವರು ಸಾಲ ವಸೂಲಿ ನೆಪದಲ್ಲಿ ರೈತರು ಅಥವಾ ಮಹಿಳೆಯರಿಗೆ ತೊಂದರೆ ನೀಡಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ವರದಿ ಪಡೆದ ಬಳಿಕ ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ಯಾವುದೇ ಫೈನಾನ್ಸ್ನವರು ತೊಂದರೆ ನೀಡಿದಲ್ಲಿ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಸಿದರು.
ಎತ್ತಿನಹೊಳೆ ಯೋಜನೆಯಡಿ ನೀರು ನೀಡುವ ಜವಾಬ್ದಾರಿ ನಮ್ಮ ಸರಕಾರದ್ದಾಗಿದೆ. ಆದರೆ ಯಾವಾಗ ಪೂರ್ಣ ಆಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೂ ಮುಂದಿನ ವರ್ಷಗಳಲ್ಲಿ ನೂರಕ್ಕೆ ನೂರು ಸಿಕ್ಕೇ ಸಿಗುತ್ತದೆ. ಕೆಸಿವ್ಯಾಲಿ ನೀರಿನಿಂದ ಯಾವುದೇ ತೊಂದರೆಯಾಗಿಲ್ಲ, ತರಕಾರಿಗಳ ಮೇಲೆ ಪರಿಣಾಮ ಇಲ್ಲವೆಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ನವರು, ಹಲವು ವಿವಿಗಳ ವಿಜ್ಞಾನಿಗಳು ಪರೀಕ್ಷೆ ಮಾಡಿ ಹೇಳಿದ್ದಾರೆ. ಕೋಲಾರದ ಮಣ್ಣು ಫಲ ವತ್ತತೆ ಕಳೆದುಕೊಂಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಹಿಂದೆ ಕಡಿಮೆ ನೀರು ಇದ್ದಾಗ ಹೆಚ್ಚು ಔಷಧಿ ಬಳಕೆಯಿಂದಾಗಿ ಫಲವತ್ತತೆ ಕಳೆದುಕೊಂಡಿ ರಬಹುದು. ಕೆಸಿವ್ಯಾಲಿ ನೀರಿಗೆ ಮೂರನೇ ಹಂತದ ಶುದ್ದೀಕರಣ ಅವಶ್ಯತೆಯಿಲ್ಲ, ಅದರಿಂದ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂದರು.
ಅಭಿವೃದ್ಧಿ ವಿಚಾರವಾಗಿ ಪ್ರಶ್ನಿಸಿದಾಗ, ಗುದ್ದಲಿ ಪೂಜೆಗಳು, ಶಂಕುಸ್ಥಾಪನೆಗಳು ನಡೆಯುತ್ತಲೇ ಇವೆ. ಅವೆಲ್ಲವೂ ಅಭಿವೃದ್ಧಿಯಲ್ಲವೇ, ನೀವು ವಿರೋಧ ಪಕ್ಷದವರ ರೀತಿ ಕೇಳಬೇಡಿ ಎಂದರು. ಬಂಗಾರಪೇಟೆ-ಕೆಜಿಎಫ್ ನಡುವೆ ಇಂಟಿಗ್ರೇಟೆಡ್ ಟೌನ್ ಶಿಫ್ ಮಾಡುತ್ತೇವೆ, ೩೦೦ ಎಕರೆ ಮಂಜೂರು ಆಗಿದೆ. ರಿಂಗ್ ರಸ್ತೆಗೆ ೧೦೦ ಕೋಟಿರೂ ನೀಡಿದ್ದನ್ನು ಕೇಂದ್ರ ಸರಕಾರವು ಯಾವುದೇ ನೋಟೀಸ್ ನೀಡದೆ ವಾಪಸ್ ಪಡೆದಿದ್ದು, ಮಾರ್ಚ್ ಬಜೆಟ್ನಲ್ಲಿ ಇದರ ಬಗ್ಗೆ ಚರ್ಚಿಸಿ ಅನುದಾನ ನೀಡಲಾಗುವುದು ಎಂದು ಹೇಳಿದರು.
ಕೋಲಾರವನ್ನು ಮಹಾನಗರ ಪಾಲಿಕೆ ಮಾಡಲು ೩ ಲಕ್ಷ ಜನಸಂಖ್ಯೆ ಇರಬೇಕು. ಈಗ ೨.೫ ಲಕ್ಷ ಜನರು ಇದ್ದಾರೆ. ಮುಂದೆ ಮಾಡಲಾಗುವುದು ಎಂದರು. ಡಿಸಿಸಿ ಬ್ಯಾಂಕ್ ಅವ್ಯವಹಾರ ವಿಚಾರವಾಗಿ ಮಾತನಾಡಿ ನ್ಯಾಯಾಲಯ ತೀರ್ಮಾನದ ಬಳಿಕ ಚುನಾವಣೆ. ಕೋಮುಲ್ ಗೆ ಸಹ ನ್ಯಾಯಾಲಯದಲ್ಲಿ ವಿವಾದ ಬಗೆಹರಿದ ಬಳಿಕ ಚುನಾವಣೆ ನಡೆಯಲಿದೆ. ಎಲ್ಲ ಶಾಸಕರು, ಸಂಸದರು, ಒಂದೇ ಕುಟುಂಬದವರು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಜಗಳ ಆಡುವುದು ಬೇಡ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಮೈತ್ರಿ ವಕೀಲರಿಗೆ ಅಗೌರವದಿಂದ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿ, ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ಇದೆ. ಎಲ್ಲರಿಗೂ ಸಮಾನವಾದ ಹಕ್ಕು ಇದೆ. ವಕೀಲರು, ಪತ್ರಕರ್ತರನ್ನು ಅಗೌರವದಿಂದ ನೋಡೋದು ಸರಿಯಲ್ಲ. ಎಸಿ ಅವರಿಗೆ ಬುದ್ಧಿ ಹೇಳುತ್ತೇನೆ, ತಪ್ಪಿದ್ದರೆ ಎಚ್ಚರಿಕೆ ನೀಡುವೆ ಎಂದರು.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಎಪಿಎಂಸಿ, ಸರಕಾರಿ ಮೆಡಿಕಲ್ ಕಾಲೇಜು, ರಿಂಗ್ ರಸ್ತೆ ಬಹು ದೊಡ್ಡ ಸಮಸ್ಯೆಯಾಗಿದ್ದು ಹಂತಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.