Menu

ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ರಾಜ್ಯದ ಆರು ಸಾಧಕರು

ಕೇಂದ್ರ ಸರ್ಕಾರ ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಿಣೆ ಮಾಡಿದ್ದು, ಕರ್ನಾಟಕದ ವಿವಿಧ ಕ್ಷೇತ್ರಗಳ ಒಟ್ಟು 9 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಬ್ಬರಿಗೆ ಪದ್ಮ ವಿಭೂಷಣ, ಇಬ್ಬರಿಗೆ ಪದ್ಮ ಭೂಷಣ, ಆರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ರಾಜ್ಯದಿಂದ ಕಲಾ ವಿಭಾಗದಲ್ಲಿ ಸಾಧನೆಗಾಗಿ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂಗೆ ಪದ್ಮವಿಭೂಷಣ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಅರಕಲಗೂಡು ಸೂರ್ಯಪ್ರಕಾಶ್​ ಮತ್ತು ಕಲಾ ವಿಭಾಗದಲ್ಲಿ ಸಾಧನೆಗಾಗಿ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ, ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್‌, ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ ವೈದ್ಯೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಚಲನಚಿತ್ರ ನಿರ್ಮಾಪಕ ಹಾಸನ ರಘು, ಉದ್ಯಮಿ ಪ್ರಶಾಂತ್ ಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

ತೊಗಲುಗೊಂಬೆಯಾಟದ ಭೀಮವ್ವ ಶಿಳ್ಳೇಕ್ಯಾತ ಕೊಪ್ಪಳ ತಾಲೂಕಿನ ಮೋರನಾಳ‌ ಗ್ರಾಮದ ನಿವಾಸಿ. 96 ವರ್ಷದ ಅವರು, ದೇಶ, ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿರುವ ಕಲಾವಿದೆ. ಭೀಮವ್ವರ ಇಡೀ ಕುಟುಂಬವೇ ತೊಗಲುಗೊಂಬೆಯಾಟ ಕಲೆಯಲ್ಲಿ ತೊಡಗಿಸಿಕೊಂಡಿದೆ. ರಾಮಯಣ, ಮಹಾಭಾರತದ ಪ್ರಸಂಗಗಳನ್ನು ಹಾಡುವ‌ ಭೀಮವ್ವ 2004 ರಲ್ಲಿ ರಾಜೋತ್ಸವ, ಜಾನಪದ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೊಗಲುಗೊಂಬೆ ಆಟದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಅವರಿಗಿದೆ.

ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್‌, 71 ವರ್ಷ ಕಾಲ ಗೊಂದಳಿ ಹಾಡಿನ ಮೂಲಕ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ. ಗೊಂದಳಿ ಕಲಾಸೇವೆ ಮೂಲಕ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಕಲಬುರಗಿ ಮೂಲದ ಡಾ.ವಿಜಯಲಕ್ಷ್ಮೀ ದೇಶಮಾನೆ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿ ಎಂದೇ ಹೆಸರು ಗಳಿಸಿ ಸತತ ನಾಲ್ಕು ದಶಕ ಕ್ಯಾನ್ಸರ್ ಪೀಡಿತರ ಸೇವೆ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *