ಬಿಹಾರದ ಮನೆಯೊಂದರ ತಾರಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಮಂಗಗಳು ತಳ್ಳಿ ಬೀಳಿಸಿ ಹತ್ಯೆ ಮಾಡಿವೆ. ವಿದ್ಯಾರ್ಥಿನಿ 10ನೇ ತರಗತಿ ಓದುತ್ತಿದ್ದಳು, ಪರೀಕ್ಷೆಗಾಗಿ ಓದುತ್ತಾ ಕುಳಿತಿರುವಾಗ ಮಂಗಗಳ ಗುಂಪೊಂದು ತಳ್ಳಿ ಬೀಳಿಸಿವೆ. ಮಂಗಗಳ ಈ ಚೇಷ್ಟೆಗೆ ಬಲಿಯಾಗಿರುವ ವಿದ್ಯಾರ್ಥಿನಿ ಪ್ರಿಯಾ ಕುಮಾರ್.
ಕೋತಿಗಳ ಗುಂಪು ತಾರಸಿಯಲ್ಲಿ ವಿದ್ಯಾರ್ಥಿನಿಗೆ ಕಾಟ ಕೊಡಲು ಶುರು ಮಾಡಿದ್ದವು, ಆಕೆ ಗಾಬರಿಗೊಂಡು ಓಡಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದ ಮನೆಯವರು ಆಕೆಯನ್ನು ನೋಡಿದ ತಕ್ಷಣ ಕೂಗಲು ಶುರು ಮಾಡಿದರು. ಆಕೆ ಮೆಟ್ಟಿಲುಗಳ ಕಡೆಗೆ ಓಡಿದ್ದಳು. ಕೋತಿಗಳು ಆಕೆಯನ್ನು ಮೇಲಿಂದ ಕೆಳಗೆ ತಳ್ಳಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಬಿದ್ದ ರಭಸಕ್ಕೆ ಆಕೆಯ ತಲೆಯ ಹಿಂಭಾಗಕ್ಕೆ ತೀವ್ರ ಪೆಟ್ಟಾಗಿತ್ತು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಮಂಗಗಳು ಅವಾಂತರ ಸೃಷ್ಟಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.