ಕೊಪ್ಪಳ: ನಾಡಿನ ಅಭಿವೃದ್ಧಿ ಆಗಬೇಕಂದರೆ ಸಂಸ್ಕೃತಿ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಇವು ಚನ್ನಾಗಿದ್ದರೆ ನಾಡನ್ನು ನೋಡುವ ದೃಷ್ಟಿ ಚನ್ನಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾವು ಸಹ ಕನ್ನಡ ಸಾಹಿತ್ಯದ ವಿವಿಧ ಘಟಕಗಳ ಪದಾಧಿಕಾರಿ, ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಹಿಂದಿನ ಸರಕಾರ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ಸದಸ್ಯರನ್ನು ನೇಮಿಸಲಿಲ್ಲ. ಪ್ರಶಸ್ತಿಗಳನ್ನು ನೀಡಲಿಲ್ಲ. ನಮ್ಮ ಸರಕಾರ ಈ ಎಲ್ಲ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಕೊಡುಗೆ ದೊಡ್ಡದು ಎಂಬುದನ್ನು ಸ್ಮರಿಸಬೇಕು. ಅನುದಾನ ನೀಡುತ್ತಿದ್ದಾರೆ. ನಾಡು-ನುಡಿಯ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಸರಕಾರ ಸದಾ ಸಿದ್ಧ. ಸರಕಾರ ರಚನೆಯಾದ ಬಳಿಕ ಸಚಿವ ಸ್ಥಾನ ನೀಡುವಾಗ ಮುಖ್ಯಮಂತ್ರಿಗಳು ಈ ಇಲಾಖೆಯ ಹೊಣೆ ನೀಡಿದ ಆರಂಭದಲ್ಲಿ ಕೊಂಚ ವಿಚಲಿತನಾಗಿದ್ದೆ. ಒಂದೆರಡು ಸಭೆಗಳ ಬಳಿಕ ಇಲಾಖೆಯನ್ನು ಕ್ರಿಯಾಶೀಲಗೊಳಿಸುವ, ಸಬಲಗೊಳಿಸುವ ವಿಶ್ವಾಸ ವೃದ್ಧಿಯಾಗಿ ಸದ್ಯ ಕನ್ನಡ ಸಾಹಿತ್ಯದ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಮರ್ಥವಾಗಿ ಹೊಷೆ ನಿರ್ವಹಿಸುತ್ತಿರುವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭಗಳು ರಾಜಧಾನಿಗೆ ಸೀಮಿತ ಮಾಡುವುದು ಬೇಡ ಎಂದು ತೀರ್ಮಾನಿಸಿ ಕೊಪ್ಪಳದಲ್ಲಿ ಮಾಡುತ್ತಿದ್ದೇವೆ. ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಈ ಭಾಗದ ತಜ್ಞರನ್ನು ನೇಮಿಸಲಾಗುತ್ತಿದೆ. ಪ್ರಶಸ್ತಿಗಳನ್ನು ಈ ಭಾಗದ ಅರ್ಹರಿಗೆ ನೀಡುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ತೇರು ನಾಡಿನಾದ್ಯಂತ ಸಂಚರಿಸಿ ಯಶಸ್ವೀಯಾಗಿದೆ. ಇದರ ಶ್ರೇಯಸ್ಸು ಪ್ರಾಧಿಕಾರದ, ಅಕಾಡೆಮಿಯ ಎಲ್ಲ ಗಣ್ಯಮಾನರಿಗೆ ಸಲ್ಲುತ್ತದೆ. ಜನವರಿ 27ರಂದು ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪುತ್ಥಳಿ ಪ್ರತಿಷ್ಠಾಪನೆ ನಡೆಯುತ್ತಿರುವುದು ಸಂತಸ ತಂದಿದೆ. ಕನ್ನಡ ಉಳಿಯಲಿ, ಬೆಳೆಯಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ತಾವು ಮೂಲತಃ ಸಾಹಿತಿಯಲ್ಲ, ಸಾಹಿತ್ಯಾಸಕ್ತೆ. ರಾಜಧಾನಿಯಲ್ಲೇ ಕನ್ನಡ ಮಾಯ ಆಗಿದೆ. ಕನ್ನಡ ಉಳಿಸಲು, ಬೆಳೆಸಲು ಅಕಾಡೆಮಿ, ಪ್ರಾಧಿಕಾರ ಇವೆ. ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರ ಸಮಸ್ಯೆಯಾಗಿ ಮರು ಪರೀಕ್ಷೆ ನಡೆಯಿತು. ಅಲ್ಲೂ ಮತ್ತದೇ ತಪ್ಪು ನಡೆದಿರುವುದನ್ನು ಗಮನಿಸಿದರೆ ಭಾಷೆಯ ಬಗ್ಗೆ ಅಸಡ್ಡೆ ಎದ್ದು ಕಾಣುತ್ತದೆ ಎಂದು ಅವರು ದೂರಿದರು.
ಭಾಷಾ ಸಮಸ್ಯೆಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದು ಕನ್ನಡಕ್ಕೆ ಬಡತನ ಬಂದಿದೆ ಏನೋ ಅನಿಸುತ್ತಿದೆ. ಖಾಸಗಿ ಶಾಲೆಗಳಿಗೆ ಪರವಾನಗಿ ನೀಡುವುದನ್ನು ನಿಲ್ಲಿಸಬೇಕು. ಪ್ರಶಸ್ತಿಗಳನ್ನು ಅರ್ಜಿ ಕರೆದು ಕೊಡುವುದು ಸಮಂಜಸವಲ್ಲ. ಅರ್ಹರನ್ನು ಗುರುತಿಸುವ ಕೆಲಸ ಸರಕಾರ ಮಾಡಬೇಕು. ಕನ್ನಡ ಇವತ್ತು ಸೊರಗಿದೆ. ಎಂದು ಅವರು ವಿಷಾದಿಸಿದರು.
ಅಕಾಡೆಮಿಯ ರಿಜಿಸ್ಡ್ರಾರ್ ಕರಿಯಪ್ಪ ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಪ್ರಾಸ್ತಾವಿಕ ಮಾತನಾಡಿದರು. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿನಂದನಾ ನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ವಿವಿಯ ಕುಲಪತಿ ಡಾ.ಬಿ.ಕೆ.ರವಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಜಂಟೀ ನಿರ್ದೇಶಕ
ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ಕೊಟ್ರೇಶ್, ಅಕಾಡೆಮಿಯ ಸದಸ್ಯ ಅಜ್ಮೀರ ನಂದಾಪುರ ಸೇರಿದಂತೆ ಅನೇಕ ಗಣ್ಯಮಾನ್ಯರು ಇದ್ದರು.
2022ನೇ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು
ಆರ್.ಕೆ.ಹುಡುಗಿ
ಅಗ್ರಹಾರ ಕೃಷ್ಣಮೂರ್ತಿ
ಡಾ.ಇಂದಿರಾ ಹೆಗ್ಗಡೆ
ರಂಜಾನ್ ದರ್ಗಾ
ತುಂಬಾಡಿ ರಾಮಯ್ಯ (ಗೈರು)
2022ನೇ ವರ್ಷದ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರು
ಡಾ.ಬಂಜಗೆರೆ ಜಯಪ್ರಕಾಶ್
ಡಾ.ಎಂ.ಜಿ.ಮಂಜುನಾಥ
ಡಾ.ರಾಜಶೇಖರ ಹತಗುಂದಿ
ದಾಸನೂರು ಕೂಸಣ್ಣ
ಡಾ.ಅನಸೂಯ ಕಾಂಬಳೆ
ಬಿ.ಮಹೇಶ್ ಹರವೆ
ಎಚ್.ಆನ್.ಆರತಿ
ಚಲಂ ಹಾಡ್ಲಹಳ್ಳಿ
ರೂಮಿ ಹರೀಶ್
ಡಾ.ಸಾರಿಕಾದೇವಿ ಎಲ್.ಕಾಳಗಿ