ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ವಿರುದ್ದ ಶೀಘ್ರದಲ್ಲೇ ಹೈಕಮಾಂಡ್ ಗೆ ದೂರು ನೀಡುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನು ಈ ಹಿಂದೆ ಪಕ್ಷ ಉಚ್ಚಾಟನೆ ಮಾಡಿತ್ತು. ಆಗ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಬಿಜೆಪಿಗೆ ಬಂದಿದ್ದೀರಿ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿ, ಸೈಕಲ್, ಸ್ಕೂಟರ್, ಬಸ್, ಕಾರಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಪಕ್ಷ ಕಟ್ತಿದ್ದಾಗ ಯತ್ನಾಳ್ ಕಣ್ ಬಿಟ್ಟಿರಲಿಲ್ಲ, ಎಚ್ಚರಿಕೆಯಿಂದ ಯತ್ನಾಳ್ ಮಾತನಾಡಬೇಕು.ಹೀಗೆಲ್ಲ ಮಾತಾಡೋದನ್ನು ಇನ್ನುಮುಂದೆ ಸಹಿಸಲು ಸಾದ್ಯವಿಲ್ಲ ಎಂದಿದ್ದಾರೆ. ವಿಜಯೇಂದ್ರ ಅವರಿಗೆ ಬೈದರೆ ಹೈಕಮಾಂಡ್ ಗೆ ಬೈದಂತೆ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ಯಾವ ನೈತಿಕತೆ ಇದೆ, ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ, ಕಾಂಗ್ರೆಸ್ ಏಜೆಂಟ್ ನಂತೆ ವರ್ತನೆ ಮಾಡ್ತಿದ್ದಾರೆ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕೆಲವರು ಯತ್ನಾಳ್ ನ ಎತ್ತಿ ಕಟ್ತಿದ್ದಾರೆ, ಕೆಲವರು ವಿಜಯೇಂದ್ರರ ವರ್ಚಸ್ಸು ಕುಗ್ಗಿಸಬಹುದು ಅಂತ ಅಂದುಕೊಂಡಿದ್ದಾರೆ. ಇನ್ಮುಂದೆ ಸಹಿಸಲ್ಲ ಮುಂದಿನ ಶನಿವಾರ ನಾವು ಸಭೆ ಸೇರುತ್ತೇವೆ, ಹೈಕಮಾಂಡ್ ಬಳಿಗೆ ಹೋಗಿ ದೂರು ಕೊಡುತ್ತೇವೆ ಎಂದು ಹೇಳಿದ್ದಾರೆ. ಉತ್ತರ ಕರ್ನಾಟಕದ ಹುಲಿ ಅಂತಾರೆ, ಉ.ಕಕ್ಕೆ ಎಷ್ಟು ಅನುದಾನ ಭರಿಸಿದ್ದೀರಿ, ಹಿಂದೂ ಹುಲಿ ಮುಖವಾಡ ಹಾಕಿದವರು ಟಿಪ್ಪು ಟೋಪಿ ಹಾಕಿ, ಖಡ್ಗ ಹಿಡಿದು ಅವರ ಜತೆ ಊಟ ಮಾಡಿದ್ರಿ, ಎಲ್ಲಿ ಹೋಗಿತ್ತು ಆಗ ಹಿಂದೂ ಹುಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ದು ದ್ವಂದ್ವ ನಿಲುವಿನ ಮುಖವಾಡ. ಎಲ್ರೂ 2ಎ ಗಾಗಿ ಹೋರಾಟ ಮಾಡಿದ್ರೆ, ನಮಗೆ 2ಎ ಮೀಸಲಾತಿ ಬೇಡ ಅಂತಾರೆ . ನಿಮ್ಮ ಬೆಂಬಲಕ್ಕೆ ಸಂಸದರು ಇದ್ದಾರೆ ಅಂದ್ರಲ್ಲ, ತಾಕತ್ ಇದ್ರೆ ಅವರ ಹೆಸರು ಹೇಳಿ ಎಂದರು. ಏನೇ ಇದ್ರೂ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು. ಯತ್ನಾಳ್, ರಮೇಶ್ ಜಾರಕಿಹೊಳಿ ಮಾತುಗಳಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಆಕಾಶಕ್ಕೆ ಉಗುಳಿದರೆ, ಅದು ಉಗುಳಿದವರ ಮೇಲೆಯೇ ಬೀಳುತ್ತದೆ ಎಂದಿದ್ದಾರೆ.