Thursday, January 30, 2025
Menu

ಮುಡಾ ಅಕ್ರಮದಲ್ಲಿ “ಕೋಕನಟ್‌” ಕೋಡ್‌ವರ್ಡ್‌ : ಸಿಕ್ಕಿಬಿದ್ದ ಬಿಲ್ಡರ್‌

ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ 300 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ  ಮುಟ್ಟುಗೋಲು ಹಾಕಿದ ಬೆನ್ನಲ್ಲೇ “ಕೋಕನಟ್‌” ಕೋಡ್‌ವರ್ಡ್‌ ಬಳಸಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದ ವಿಚಾರ ಬಹಿರಂಗಗೊಂಡಿದೆ.

ಇಡಿ ಅಧಿಕಾರಿಗಳು ಬಿಲ್ಡರ್‌ ಜಯರಾಮ್ ಮನೆ ಮೇಲೆ ದಾಳಿ ನಡೆಸಿದ್ದರು. ಈತ ಮುಡಾ ಅಕ್ರಮದ ಕಿಂಗ್‌ಪಿನ್‌ ಎನ್ನಲಾಗಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಯರಾಮ್ ಮನೆ ಹಾಗೂ ಕಚೇರಿಯಲ್ಲಿ ಇಡಿ ಅಧಿಕಾರಿಗಳು 70 ಗಂಟೆ ಶೋಧ ನಡೆಸಿದ್ದರು. ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದೆ. ಈತ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘ ಸ್ಥಾಪನೆ ಮಾಡಿದ್ದ. ಈ ಸಂಘದಲ್ಲಿ ಮುಡಾ ಮಾಜಿ ಆಯುಕ್ತ ದಿನೇಶ್ ಕುಟುಂಬಸ್ಥರು ನಿರ್ದೇಶಕರಾಗಿದ್ದರು. ಬಹುತೇಕ ಬೇನಾಮಿ ವ್ಯವಹಾರಗಳನ್ನು ಈ ಸಹಕಾರ ಸಂಘದ ಹೆಸರಿನಲ್ಲಿ ಮಾಡಿರುವುದು ಪತ್ತೆಯಾಗಿದೆ.

ಇಡಿ ವಾಟ್ಸಪ್‌ ಚಾಟ್‌ ಪರಿಶೀಲಿಸಿದಾಗ, 1 ಕೋಕನಟ್‌ ಕಳುಹಿಸಿದ್ದೇನೆ. 50 ಕೋಕನಟ್‌ ಕಳುಹಿಸಿದ್ದೇನೆ ಎಂಬ ಮೆಸೇಜ್‌ಗಳು ಅಧಿಕಾರಿಗಳ ಗಮನ ಸೆಳೆದಿದೆ. ಜಯರಾಮ್‌ನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಕೋಕನಟ್‌ ಎಂಬುದು ಮುಡಾ ಹಣಕಾಸಿನ ಅಕ್ರಮಕ್ಕೆ ಕೋಡ್‌ವರ್ಡ್‌ ಇಡಲಾಗಿತ್ತು. 1 ಕೋಕನಟ್‌ ಅಂದರೆ 1 ಲಕ್ಷ ರೂ., 50 ಕೋಕನಟ್‌ ಅಂದರೆ 50 ಲಕ್ಷ ರೂ., 100 ಕೋಕನಟ್‌ ಅಂದರೆ 1 ಕೋಟಿ ರೂ. ಕಳುಹಿಸಲಾಗಿದೆ ಎಂದು ಜಯರಾಮ್‌ ಮೆಸೇಜ್‌ ಮಾಡುತ್ತಿದ್ದ.  ಇಡಿಯ ಪ್ರಾಥಮಿಕ ವಿಚಾರಣೆಯಲ್ಲಿ ಹಲವರ ಹೆಸರನ್ನು ಜಯರಾಮ್ ಬಾಯಿಬಿಟ್ಟಿದ್ದಾನೆ. ಜಯರಾಮ್‌ ಮನೆ ಮೇಲೆ ದಾಳಿ ಆಗುತ್ತಿದ್ದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್‌ ಪರಾರಿಯಾಗಿದ್ದರು.

ಹಲವು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲಿ ಜಯರಾಮ್ ಹಣ ಕಳುಹಿಸಿದ್ದ. 15 ವರ್ಷದ ಹಿಂದೆ ಗಾರೆ ಕೆಲಸಕ್ಕೆ ಬಂದಿದ್ದ ಜಯರಾಮ್ ಬೇನಾಮಿಯಿಂದಲೇ ಕೋಟ್ಯಾಧೀಶ್ವರನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ದಿನೇಶ್ ಕುಮಾರ್‌ಗೆ ಪರಮಾಪ್ತನಾಗಿದ್ದ ಜಯರಾಮ್ 50-50 ಅನುಪಾತದ ಸೈಟ್‌ ಹಂಚಿಕೆಯಲ್ಲಿ ನಂ 1 ಫಲಾನುಭವಿಯಾಗಿದ್ದಾನೆ. ಸೈಟ್‌ನಿಂದ ಮಾತ್ರವಲ್ಲದೇ ಬೇನಾಮಿ ಹಣದಿಂದಲೂ ಜಯರಾಮ್ ಶ್ರೀಮಂತನಾಗಿದ್ದಾನೆ.

Related Posts

Leave a Reply

Your email address will not be published. Required fields are marked *