15-20 ವರ್ಷಗಳ ಹಿಂದೆ ಈ ಭಾಗದಲ್ಲಿ ಜಮೀನಿನ ಬೆಲೆ ಎಷ್ಟಿತ್ತು, ಈಗ ಎಷ್ಟು ಆಗಿದೆ, ನಿಮಗೆ ನೇರವಾಗಿ ಹಣ ನೀಡಲಾಗದಿದ್ದರೂ ನಿಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನಿಮಗೆ ನೆರವಾಗಿದ್ದೇನೆ. ಆ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ಇಂಟೆಲಿಜೆನ್ಸ್ ನವರು ವರದಿ ಕಳುಹಿಸುವುದು ಬಾಕಿ ಇದೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆಯಾಗಲಿದೆ. ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಉಳಿಯಲಿದೆ. ಹೀಗಾಗಿ ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಭವಿಷ್ಯದಲ್ಲಿ ನಿಮ್ಮ ಜಮೀನಿನ ಬೆಲೆ ಏನಾಗುತ್ತದೆ ಎಂದು ನೀವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹಳ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಹಾಗಿದ್ದರೆ ಇವರುಗಳು ತಮ್ಮ ಊರು ಬಿಟ್ಟು ಇಲ್ಲಿಗೆ ಬಂದು ಯಾಕೆ ನೂರಾರು ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕನಕಪುರದ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಹಾಗೂ ಮರು ಭೂ ಮಾಪನ ಯೋಜನೆಯಡಿ ರೈತರಿಗೆ ಜಮೀನಿನ ಆರ್ ಟಿಸಿ ದಾಖಲೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸರ್ಕಾರ ಮರು ಭೂ ಮಾಪನ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮಾಡಿದ್ದು, ಮುಂದೆ ಇಡೀ ಕನಕಪುರ ತಾಲೂಕಿಗೆ ಕಾರ್ಯಕ್ರಮ ವಿಸ್ತರಣೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಈ ಭಾಗದಲ್ಲಿ ಭೂ ಮಾಪನ ಮಾಡಿದ್ದರು. ಈಗ ಹೊಸ ಮಾದರಿಯಲ್ಲಿ ಭೂ ಮಾಪನ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ಇದು ಮುಂದಿನ ತಲೆಮಾರಿಗೂ ಬಹಳ ಉಪಯೋಗವಾಗಲಿದೆ, ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ತಿಳಿಸಿದರು.
ನಾನು ಶಾಸಕನಾದ ನಂತರ 8 ಸಾವಿರ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಮಾಡಿ ಜಮೀನು ಹಂಚಿದ್ದೇನೆ. ನಿಮ್ಮ ಜಮೀನಿನ ದಾಖಲೆಯಲ್ಲಿ ತಪ್ಪುಗಳಾಗಿದ್ದರೆ ಅದನ್ನು ತಿದ್ದುಕೊಳ್ಳಲು ಒಂದು ತಿಂಗಳು ಕಾಲಾವಕಾಶವಿದೆ. ಪಹಣಿ ಹಾಗೂ ಭೂ ನಕ್ಷೆ ಒಂದೇ ದಾಖಲೆಯಲ್ಲಿ ಬರುತ್ತಿದೆ ಎಂದರು.
ಕುಮಾರಸ್ವಾಮಿ, ಮಂಜುನಾಥ್ ಭೂಮಿ ದಾನ ಮಾಡಿದ್ದಾರ?
ಈ ಕ್ಷೇತ್ರದಲ್ಲಿ ಸೋಲಾರ್ ಪ್ಲಾಂಟ್ ತಂದಿದ್ದೇನೆ. ಅದರ ಪಕ್ಕದಲ್ಲಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಜಮೀನು ನೀಡಿದ್ದೇನೆ, ನಮ್ಮ ಅಜ್ಜಿ ಹೆಸರಿನಲ್ಲಿ ಖರೀದಿ ಮಾಡಿದ್ದ ಜಮೀನನ್ನು ಶಾಲೆಗೆ ಬರೆದುಕೊಟ್ಟಿದ್ದೇನೆ. ಕುಮಾರಸ್ವಾಮಿ ಅಥವಾ ಸಂಸದ ಮಂಜುನಾಥ್ ಅವರು ರಾಜ್ಯದಲ್ಲಿ ಯಾರಿಗಾದರೂ ಒಂದು ಎಕರೆ ದಾನ ಮಾಡಿದ್ದಾರಾ ಎಂದು ಡಿಕೆಶಿ ಪ್ರಶ್ನಿಸಿದರು.
ಕನಕಪುರದಲ್ಲಿ ಯಾವಾಗ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ನನಗೆ ಗೊತ್ತಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಘೋಷಣೆಯಾಗಿದ್ದ ಕಾಲೇಜನ್ನು ತಪ್ಪಿಸಿದರು. ಇದೊಂದು ಕೆಲಸ ಬಾಕಿ ಇದೆ. ಮುಂದಿನ ದಿನಗಳಲ್ಲಿ ಇನ್ನು ಅನೇಕ ಯೋಜನೆ ಹಾಕಿಕೊಳ್ಳುತ್ತೇವೆ ಎಂದು ಡಿಸಿಎಂ ಭರವಸೆ ನೀಡಿದ್ದಾರೆ.