ಬೆಂಗಳೂರು: ಬೆಂಗಳೂರಿನಲ್ಲಿ ಇಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ (ISF) ಸಾಧಕ ಸಂಶೋಧಕರಿಗೆ ಇನ್ಫೋಸಿಸ್ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಸತತ 16 ವರ್ಷಗಳಿಂದ ನೀಡುತ್ತಾ ಬರಲಾಗುತ್ತಿರುವ ಬಹುಮಾನದ ಮಾನದಂಡವನ್ನು ಬದಲಾವಣೆ ಮಾಡಲಾಗಿದೆ. ಅದರಂತೆ 40 ವರ್ಷದೊಳಗಿನ ಸಂಶೋಧಕರು ಮತ್ತು ಅಸಾಧಾರಣ ಪ್ರತಿಭೆಗಳನ್ನು ಆರಂಭದಲ್ಲಿಯೇ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿರ್ಧಾರಕ್ಕೆ ಬರಲಾಗಿದೆ.
ಅರ್ಥಶಾಸ್ತ್ರ, ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಲೈಫ್ ಸೈನ್ಸಸ್, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳು, ಗಣಿತ ವಿಜ್ಞಾನ ಮತ್ತು ಭೌತಿಕ ವಿಜ್ಞಾನಗಳು ಸೇರಿ ಆರು ವಿಭಾಗಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ ಪ್ರತಿಭೆಗಳನ್ನು ಗುರುತಿಸಿ ಈ ಪ್ರತಿಷ್ಠಿತ ಬಹುಮಾನವನ್ನು ನೀಡಲಾಗುತ್ತದೆ.
ಈ ಬಾರಿಯ ವಿಜೇತರರಿಗೆ ಮುಖ್ಯ ಅತಿಥಿಗಳಾದ ಪ್ರೊಫೆಸರ್ ಪೀಟರ್ ಸರ್ನಾಕ್, ಗೋಪಾಲ್ ಪ್ರಸಾದ್ ಗಣಿತ ಪ್ರೊಫೆಸರ್, ಇನ್ ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಮತ್ತು ಯೂಗೆನ್ ಹಿಗ್ಗಿನ್ಸ್ ಗಣಿತ ಪ್ರೊಫೆಸರ್, ಪ್ರಿನ್ಸ್ ಟನ್ ಯೂನಿವರ್ಸಿಟಿ ಅವರು ಬಹುಮಾನ ವಿತರಿಸಿದರು. ಈ ಬಹುಮಾನವು 1,00,000 ಯುಎಸ್ ಡಾಲರ್ ಮೊತ್ತದ್ದಾಗಿದ್ದು, ಶುದ್ಧ ಚಿನ್ನದ ಪದಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.
ಈ ಭವ್ಯ ಸಮಾರಂಭದಲ್ಲಿ ವಿಶ್ವದಾದ್ಯಂತದ ಖ್ಯಾತನಾಮ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು, ವಾಣಿಜ್ಯೋದ್ಯಮಿಗಳು, ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ನ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್ (ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರು), ನಾರಾಯಣಮೂರ್ತಿ, ಡಾ.ಪ್ರತಿಮಾ ಮೂರ್ತಿ, ಶ್ರೀನಾಥ್ ಬಟ್ನಿ, ಕೆ.ದಿನೇಶ್, ನಂದನ್ ನೀಲೇಕಣಿ, ಮೋಹನ್ ದಾಸ್ ಪೈ, ಸಲೀಲ್ ಪರೇಖ್ ಮತ್ತು ಎಸ್.ಡಿ.ಶಿಬುಲಾಲ್ ಅವರು ಉಪಸ್ಥಿತರಿದ್ದರು.