Menu

ಜಾಗೃತಿ ಜಾಥಾ ಮುಂದಿನ ದಿಕ್ಸೂಚಿ: ಗವಿಶ್ರೀ

gavishree

ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಜಾಗೃತಿ ಜಾಥಾ ಮುಂದಿನ ಭವಿಷ್ಯದ ದಿಕ್ಸೂಚಿ ಎಂದು ಇಲ್ಲಿನ ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದಲ್ಲಿ ಶನಿವಾರ ನಡೆದ ವಿಕಲಚೇತನರ ನಡಿಗೆ ಸಕಲಚೇತನರ ಕಡೆಗೆ ಹೆಸರಿನ ಜಾಗೃತಿ ಜಾಥಾ ಸಮಾರೋಪದ ವೇಳೆ ಮಾತನಾಡಿದ ಶ್ರೀಗಳು, ಕಳೆದ 11 ವರ್ಷಗಳಿಂದ ಇಂಥ ಸಮಾಜಮುಖಿ ಜಾಥಾಗಳನ್ನು ಗವಿಮಠ ಯೋಚಿಸಿ, ಯೋಜಿಸಿ ನಡೆಸುತ್ತಾ ಬಂದಿದೆ. ಮುಂದಿನ ವರ್ಷ ಜಾಥಾದ ವಿಷಯ ಆಯ್ಕೆಯ ಟಾಸ್ಕ್ನ್ನು ವಿದ್ಯಾರ್ಥಿಗಳಿಗೆ ವಹಿಸಿ, ಮುಂದಿನ ವರ್ಷ ವಿದ್ಯಾರ್ಥಿ ಕೊಡುವ ವಿಷಯವೇ ಜಾಥಾಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿಷಯ ಕೊಟ್ಟ ವಿದ್ಯಾರ್ಥಿಯಿಂದಲೇ ಜಾಗೃತಿ ಜಾಥಾ ಉದ್ಘಾಟನೆಗೊಳ್ಳಲಿದೆ ಎಂದು ಘೋಷಿಸಿದರು.

ಪ್ರತಿ ವರ್ಷ ಅಜ್ಜನ ಜಾತ್ರೆಯ ತೇರು ಎಳೆಯುವುದಕ್ಕಿಂತ ಜಾಗೃತಿ ಜಾಥಾದ ವಿದ್ಯಾರ್ಥಿಗಳ ಹೆಜ್ಜೆಗಳು ದೊಡ್ಡವು. ಇವು ಬರುವ ಪೀಳಿಗೆಗೆ ಹೆಜ್ಜೆಗುರುತಾಗಬೇಕು. ಸಾಮಾಜಿಕ ಕಳಕಳಿ ತೋರಿಕೆಗೆ ಆಗದೇ ನಿಜಕ್ಕೂ ಅದು ಸಾಕಾರಗೊಳ್ಳಬೇಕು. ಈ ವರ್ಷ ಕೃತಕ ಕೈ-ಕಾಲು ಜೋಡಣೆಗೆ ಹೆಸರು ನೋಂದಾಯಿಸಿದ ಎಲ್ಲರಿಗೂ ಉಚಿತವಾಗಿ ಕಾಲು ನೋಡಿಸುವ ಕಾಯಕವನ್ನು ಮಠದ ಸದ್ಭಕ್ತರು, ದಾನಿಗಳ ಸಹಾಯದ ಕಾರ್ಯಕ್ಕೆ ಶ್ರೀಮಠ ಕೈ ಜೋಡಿಸುತ್ತದೆ ಎಂದರು.

ಕಾಶ್ಮೀರದ ಮಾನಸಿಂಗ್-ಶಕ್ತಿದೇವಿ ಉದರದಲ್ಲಿ ಎರಡೂ ಕೈಗಳೇ ಇಲ್ಲದೇ ಜನಿಸಿದ ಶೀತಲ್ದೇವಿ ನಮಗೆಲ್ಲ ಸ್ಫೂರ್ತಿಯಾಗಬೇಕು. ಬಡಕುಟುಂಬದಲ್ಲಿ ಜನಿಸಿ, ಬಿಲ್ವಿದ್ಯೆಯಲ್ಲಿ ಕೈ ಇದ್ದರೂ ಗುರಿ ತಲುಪದ ಎಷ್ಟೋ ಜನರ ನಡುವೆ ಶೀತಲ್ ದೇವಿ ಕಾಲುಗಳಿಂದಲೇ ಆರ್ಚರಿ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದು ಮಾತ್ರವಲ್ಲ, ಪ್ಯಾರಾ ಏಷಿಯನ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಕೀರ್ತಿ ಶೀತಲ್ದೇವಿಯದ್ದು ಎಂದು ಪ್ರೇರಣಾತ್ಮಕ ನೈಜ ಸಂಗತಿಯನ್ನು ನೆರೆದ ವಿದ್ಯಾರ್ಥಿಗಳಿಗೆ ಹೇಳಿದರು.

ಪೂರ್ವದಲ್ಲಿ ಮೈಸೂರಿನ ವಾಕ್-ಶ್ರಮಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪುಷ್ಪಾವತಿ, ಹುಬ್ಬಳ್ಳಿಯ ಮಹಾವೀರ ಕೃತಕ ಕಾಲು ಜೋಡಣಾ ಸಂಸ್ಥೆಯ ಮಹೇಂದ್ರ ಸಿಂಗ್ವಿ, ಭಾರತೀಯ ರೆಡ್ಕ್ರಾಸ್ನ ಚೇರಮನ್ ವಿಜಯಕುಮಾರ ಶಾಂತಗೇರಿ ಮಾತನಾಡಿದರು.

ಈ ವೇಳೆ ಡಿವೈಎಸ್ಪಿ ಮುತ್ತಣ್ಣನವರ್, ಡಿಡಿಪಿಯು ಜಗದೀಶಕುಮಾರ್, ಬಿಇಒ ಟಿ.ಎಸ್.ಶಂಕ್ರಯ್ಯ ವೇದಿಕೆಯಲ್ಲಿದ್ದರು. ಶರಣಬಸಪ್ಪ ಬಿಳಿಯಲಿ ನಿರ್ವಹಿಸಿದರು. ಶಕುಂತಲಾ ಬಿನ್ನಾಳ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಕ್ರೀಡಾಂಗಣದಿಂದ ಪ್ರಮುಖ ರಸ್ತೆಗಳ ಮಾರ್ಗವಾಗಿ ಸುಮಾರು 18 ಸಾವಿರ ವಿದ್ಯಾರ್ಥಿಗಳ ಜಾಗೃತಿ ಜಾಥಾ ಗವಿಮಠ ತಲುಪಿತು.

Related Posts

Leave a Reply

Your email address will not be published. Required fields are marked *