ಉದಯಕಾಲ ನ್ಯೂಸ್, ಕೊಲ್ಹಾಪುರ (ಮಹಾರಾಷ್ಟ್ರ): ಪ್ರೇಮದ ಕಥೆಗಳಲ್ಲಿ ನಡೆಯುತ್ತಿರುವ ಹತ್ಯೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದಕ್ಕೆ ಪುಷ್ಟಿಯೆಂಬಂತಿದೆ ಈ ದುರಂತ ಪ್ರೇಮಕಥೆ. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವತಿಯೊಬ್ಬಳು ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಕ್ಕೆ ಆಕ್ರೋಶಗೊಂಡ ಪ್ರೇಮಿಯೇ ತನ್ನ ಗೆಳತಿಯನ್ನು ಜಲಪಾತದ ಮೇಲಿನಿಂದ ಕಣಿವೆಗೆ ತಳ್ಳಿ ಭೀಕರವಾಗಿ ಹತ್ಯೆ ಮಾಡಿರುವ ಅಘಾತಕಾರಿ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಕೃತ್ಯ ಎಸಗಿ ಹುಡುಗಿ ನಾಪತ್ತೆಯಾಗಿದ್ದಾಳೆಂಬ ನಾಟಕವಾಡಿದ್ದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಆರೋಪಿ ಶ್ರೀಪಾದ್ ವಾದರ್ (25) ಹಾಗೂ ಮೃತ ಯುವತಿ ತರನ್ನಮ್ ಬಶೀರ್ ನಾಯ್ಕ್ (23) ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕೆಲವು ತಿಂಗಳ ಹಿಂದೆ ತರನ್ನಮ್‌ಗೆ ಕುಟುಂಬದವರು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಈ ಬೆಳವಣಿಗೆಯಿಂದ ತರನ್ನಮ್, ಶ್ರೀಪಾದ್‌ನಿಂದ ದೂರವಾಗಿ ಬ್ರೇಕಪ್ ಮಾಡಿಕೊಳ್ಳಲು ಬಯಸಿದ್ದಳು. ಆದರೆ ಪ್ರಿಯತಮೆ ಬೇರೊಬ್ಬನ ಮಡಿಲೇರುವುದನ್ನು ಸಹಿಸದ ಆರೋಪಿ ಶ್ರೀಪಾದ್ ಆಕ್ರೋಶಗೊಂಡಿದ್ದನು.
ಪ್ರವಾಸದ ನೆಪದಲ್ಲಿ ಕರೆದೊಯ್ದು ಕೊಲೆ
ಮದುವೆಗೂ ಮುನ್ನ ಕೊನೆಯ ಬಾರಿಗೆ ಭೇಟಿಯಾಗೋಣ ಎಂದು ನಂಬಿಸಿ ಅಕ್ಟೋಬರ್ 9ರಂದು ಶ್ರೀಪಾದ್, ತರನ್ನಮ್‌ಳನ್ನು ಭುದರಗಢ ತಾಲೂಕಿನ ಪಾಟಗಾಂವ್ ಗ್ರಾಮದ ಬಳಿಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಜಲಪಾತದ ಬಳಿಗೆ ಕರೆದೊಯ್ದಿದ್ದಾನೆ. ಅಲ್ಲಿ ತನ್ನನ್ನೇ ವಿವಾಹವಾಗುವಂತೆ ತರನ್ನಮ್‌ಗೆ ಆತ ಒತ್ತಾಯಿಸಿದ್ದಾನೆ. ಆದರೆ ಆಕೆ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಜಗಳ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಶ್ರೀಪಾದ್, ಯುವತಿಯನ್ನು ಜಲಪಾತದ ಮೇಲಿನಿಂದ ಆಳವಾದ ಕಣಿವೆಗೆ ತಳ್ಳಿ ಕೊಂದಿರುವ ಧಾರುಣ ಘಟನೆ ನಡೆದಿದೆ.
ಹುಡುಗಿ ನಾಪತ್ತೆ ನಾಟಕವಾಡಿದ ಆರೋಪಿ
ಘಟನೆಯ ಬಳಿಕ ಮನೆಗೆ ಮರಳಿದ ಶ್ರೀಪಾದ್, ತರನ್ನಮ್ ನಾಪತ್ತೆಯಾಗಿದ್ದಾಳೆ ಎಂದು ಕುಟುಂಬಸ್ಥರ ಮುಂದೆ ಕಣ್ಣೀರಿನ ನಾಟಕವಾಡಿದ್ದಾನೆ. ತಾನು ಬೈಕ್ ನಿಲ್ಲಿಸಿ ಆಕೆಗೆ ಕುಡಿಯಲು ನೀರು ತರಲು ಹೋದ ಸಂದರ್ಭದಲ್ಲಿ ಆಕೆ ತಪ್ಪಿಸಿಕೊಂಡು ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಆರಂಭದಲ್ಲಿ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಆದರೆ, ತನಿಖೆಯ ವೇಳೆ ಆರೋಪಿ ಶ್ರೀಪಾದ್ ನೀಡಿದ ಹೇಳಿಕೆಗಳಲ್ಲಿ ಸಾಕಷ್ಟು ಗೊಂದಲಗಳಿರುವುದನ್ನು ಪೊಲೀಸರು ಗುರುತಿಸಿದರು. ಇಬ್ಬರ ಮೊಬೈಲ್ ಫೋನ್ ಚಾಟ್‌ಗಳು ಮತ್ತು ಕರೆ ವಿವರಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ. ಬಳಿಕ ಪೊಲೀಸರ ತೀವ್ರ ವಿಚಾರಣೆಯಲ್ಲಿ ಆರೋಪಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಂಬೋಲಿಯ ಸಹ್ಯಾದ್ರಿ ರಕ್ಷಣಾ ತಂಡದ (Sahyadri Rescue Team) ಸಹಾಯದಿಂದ ಪೊಲೀಸರು ಕಣಿವೆಯ ಆಳದಿಂದ ತರನ್ನಮ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ.
ತ್ವರಿತ ವಿಚಾರಣೆಗೆ ಕುಟುಂಬಸ್ಥರ ಆಗ್ರಹ
ಯುವತಿಯ ಅಕಾಲಿಕ ಹಾಗೂ ಕ್ರೂರ ಹತ್ಯೆಯಿಂದ ಆಕ್ರೋಶಗೊಂಡಿರುವ ತರನ್ನಮ್ ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು, ಆರೋಪಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ (Fast Track Court) ನಡೆಸಿ, ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಮೊಬೈಲ್ ಫೋನ್‌ಗಳು ಹಾಗೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
#KolhapurCrime #PataGaonWaterfall #TarannumNaik #ShripadVadar #CrimeNewsKannada #UdayakalaNews #MaharashtraPolice #BreakingNews #JusticeForTarannum

