Menu

ತಮಿಳುನಾಡಿನ ಹಿತಾಸಕ್ತಿಯಲ್ಲಿ ಯಾವುದೇ ರಾಜಿ ಇಲ್ಲ: ಕ್ಷೇತ್ರ ಮರುವಿಂಗಡಣೆಗೆ 2 ಬೇಡಿಕೆಯಿಟ್ಟ ಸ್ಟಾಲಿನ್!

ಉದಯಕಾಲ ನ್ಯೂಸ್, ಚೆನ್ನೈ: ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಹತ್ವದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮಂಡಿಸಿ ಅಂಗೀಕರಿಸಲು ಸಿದ್ಧತೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರದ ಮುಂದೆ ಎರಡು ಕಟ್ಟುನಿಟ್ಟಿನ ಬೇಡಿಕೆಗಳನ್ನು ಇರಿಸಿದ್ದಾರೆ. ತಮಿಳುನಾಡಿನ ಹಿತಾಸಕ್ತಿಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ; ಲೋಕಸಭೆಯಲ್ಲಿ ತಮಿಳುನಾಡಿನ ಪ್ರಾತಿನಿಧ್ಯದ ಪಾಲನ್ನು ರಕ್ಷಿಸಲು ಸೂಕ್ತ ಸಂವಿಧಾನಾತ್ಮಕ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.

ಇಂದು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸ್ಟಾಲಿನ್, ಕ್ಷೇತ್ರ ಮರುವಿಂಗಡನೆಯಿಂದ ದಕ್ಷಿಣದ ರಾಜ್ಯಗಳಿಗೆ ಆಗಬಹುದಾದ ಅನ್ಯಾಯ ಮತ್ತು ಪರಿಣಾಮಗಳ ಕುರಿತು ದೇಶದಲ್ಲೇ ಮೊದಲ ಬಾರಿಗೆ ಧ್ವನಿ ಎತ್ತಿದ್ದು ಡಿಎಂಕೆ ಪಕ್ಷವಾಗಿದೆ ಎಂದು ನೆನಪಿಸಿದ್ದಾರೆ. ಅಲ್ಲದೆ, ನ್ಯಾಯಯುತ ಕ್ಷೇತ್ರ ಮರುವಿಂಗಡಣೆಗೆ ಆಗ್ರಹಿಸಿ ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮೊದಲ ಬಾರಿಗೆ ಒಗ್ಗೂಡಿ ಸಭೆ ನಡೆಸಿದ್ದು ಚೆನ್ನೈನಲ್ಲಿ ಮಾತ್ರ ಎಂದು ಅವರು ತಿಳಿಸಿದ್ದಾರೆ.

ಡಿಎಂಕೆ ಇರಿಸಿರುವ 2 ಪ್ರಮುಖ ಬೇಡಿಕೆಗಳೇನು?

ಲೋಕಸಭಾ ಸ್ಥಾನಗಳ ಮರುಹಂಚಿಕೆಗೆ ಸಂಬಂಧಿಸಿದಂತೆ ಡಿಎಂಕೆ ಪಕ್ಷದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಸ್ಟಾಲಿನ್, ಈ ಕೆಳಗಿನ ಎರಡು ಪ್ರಮುಖ ಷರತ್ತುಗಳನ್ನು ಪುನರುಚ್ಚರಿಸಿದ್ದಾರೆ

1. ಮುಂದಿನ ದಿನಗಳಲ್ಲಿ ಲೋಕಸಭೆಯಲ್ಲಿ ಒಟ್ಟಾರೆ ಸಂಸದೀಯ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದರೂ, ಪ್ರಸ್ತುತ ಲೋಕಸಭೆಯಲ್ಲಿ ತಮಿಳುನಾಡು ಹೊಂದಿರುವ ಶೇ. 7.18ರಷ್ಟು (543ರಲ್ಲಿ 39 ಸ್ಥಾನಗಳು) ಪ್ರಾತಿನಿಧ್ಯದ ಪಾಲು ಯಾವುದೇ ಕಾರಣಕ್ಕೂ ಕಡಿಮೆಯಾಗಬಾರದು.
2. 1971ರ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗಿರುವ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಪ್ರಸ್ತುತ ಪ್ರಮಾಣವನ್ನು ಮುಂದಿನ 25 ವರ್ಷಗಳವರೆಗೆ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಳ್ಳಬೇಕು.

ಈ ಎರಡೂ ವಿಚಾರಗಳಲ್ಲಿ ಡಿಎಂಕೆ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ; ಬೇಡಿಕೆಯಲ್ಲೂ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಸ್ಟಾಲಿನ್ ಖಡಕ್ ಸಂದೇಶ ರವಾನಿಸಿದ್ದಾರೆ.

ಟೀಕಾಕಾರರಿಗೆ ಸ್ಟಾಲಿನ್ ತಿರುಗೇಟು

ಕ್ಷೇತ್ರ ಮರುವಿಂಗಡನೆ ಮಸೂದೆಗೆ ಡಿಎಂಕೆ ಬೆಂಬಲ ನೀಡಲಿದೆ ಹಾಗೂ ಅಧಿಕಾರದ ಹುದ್ದೆಗಳಿಗಾಗಿ ಪಕ್ಷವು ತನ್ನ ತತ್ವಗಳನ್ನು ಕೈಬಿಟ್ಟಿದೆ ಎಂಬ ರಾಜಕೀಯ ವಲಯದ ಆರೋಪಗಳು ಮತ್ತು ಮಾಧ್ಯಮಗಳ ವರದಿಗಳಿಗೆ ಸ್ಟಾಲಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾಧ್ಯಮಗಳಲ್ಲಿ ಹರಡುತ್ತಿರುವ ಊಹಾಪೋಹಗಳು ಮತ್ತು ಬೆನ್ನಿಗೆ ಚೂರಿ ಹಾಕುವವರ ಟೀಕೆಗಳು ನಮ್ಮ ದೃಢನಿರ್ಧಾರವನ್ನು ಎಂದಿಗೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ತತ್ವಗಳನ್ನು ಗಾಳಿಗೆ ತೂರಿದವರು ಇದನ್ನು ಅರ್ಥಮಾಡಿಕೊಳ್ಳಬೇಕು. ಡಿಎಂಕೆ ಎಂದಿಗೂ ತಮಿಳುನಾಡಿನ ಹಿತಾಸಕ್ತಿಯನ್ನು ಬಲಿ ಕೊಡುವುದಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಿಗೆ ಏಕೆ ಆತಂಕ?

ಕೇವಲ ತಮಿಳುನಾಡು ಮಾತ್ರವಲ್ಲದೆ, ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೂ ಕ್ಷೇತ್ರ ಮರುವಿಂಗಡಣೆ ಅತ್ಯಂತ ಸೂಕ್ಷ್ಮ ಮತ್ತು ಕಾಳಜಿಯ ವಿಷಯವಾಗಿದೆ. ಕಳೆದ ಹಲವು ದಶಕಗಳಿಂದ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿವೆ. ಒಂದು ವೇಳೆ ಇತ್ತೀಚಿನ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಮರುಹಂಚಿಕೆ ಮಾಡಿದರೆ, ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳ ಸ್ಥಾನಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ, ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯದ ಪಾಲು ತೀವ್ರವಾಗಿ ಕುಸಿಯಲಿದೆ ಎಂಬುದು ದಕ್ಷಿಣದ ರಾಜ್ಯಗಳ ಪ್ರಮುಖ ಆತಂಕವಾಗಿದೆ.

ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ: ಕ್ಯಾಬಿನೆಟ್ ಸಭೆ ಮಹತ್ವ

ಕೇಂದ್ರ ಸರ್ಕಾರವು ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದು, ನವೆಂಬರ್ 30ರಂದು ಲೋಕಸಭೆ ಹಾಗೂ ಡಿಸೆಂಬರ್ 2ರಂದು ರಾಜ್ಯಸಭೆ ಸಮಾವೇಶಗೊಳ್ಳಲಿದೆ. ಈ ವಿಶೇಷ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಇದರಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
#MKStalin #DMK #DelimitationBill #TamilNadu #LokSabha #ParliamentSpecialSession #SouthIndia #Karnataka #UdayakalaNews #NationalPolitics #ConstituencyDelimitation #IndianParliament #TamilNaduPolitics

Related Posts

Leave a Reply

Your email address will not be published. Required fields are marked *