Menu

250 ಕೆಜಿ ಚಿನ್ನದ ಆಭರಣ ಧರಿಸಿ ಹೆಜ್ಜೆ ಹಾಕಿದ 21 ಸಾವಿರ ಮಹಿಳೆಯರು!

ಉದಯಕಾಲ ನ್ಯೂಸ್, ರಾಜ್‌ಕೋಟ್‌: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ‘ಅಹಿರ್ ರಾಸ್ ಉತ್ಸವ’ದಲ್ಲಿ (Ahir Ras Utsav) ಮಹಿಳೆಯರು ಮೈತುಂಬಾ ಚಿನ್ನದ ಆಭರಣಗಳು ಹಾಗೂ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸಾಮೂಹಿಕವಾಗಿ ರಾಸ್ ನೃತ್ಯ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಸುಮಾರು 250 ಕೆಜಿಗೂ ಅಧಿಕ ಚಿನ್ನದ ಆಭರಣಗಳನ್ನು ಧರಿಸಿ ಸಾವಿರಾರು ಮಹಿಳೆಯರು ಒಟ್ಟಾಗಿ ಹೆಜ್ಜೆಹಾಕಿದ ಈ ಅದ್ಭುತ ದೃಶ್ಯ ನೋಡುಗರ ಕಣ್ಮನ ಸೆಳೆಯಿತು.

21 ಸಾವಿರ ಮಹಿಳೆಯರಿಂದ ಸಾಂಪ್ರದಾಯಿಕ ರಾಸ್ ಪ್ರದರ್ಶನ

ಅಹಿರ್ ಸೇನಾ ವತಿಯಿಂದ ಅತಿ ವಿಜೃಂಭಣೆಯಿಂದ ಆಯೋಜಿಸಲಾಗಿದ್ದ ಈ ವಾರ್ಷಿಕ ಮಹಾಸಂಸ್ಕೃತಿಯ ಉತ್ಸವದಲ್ಲಿ ಸೌರಾಷ್ಟ್ರದಾದ್ಯಂತ ಆಗಮಿಸಿದ್ದ ಬರೋಬ್ಬರಿ 21,000 ಸಾವಿರಕ್ಕೂ ಅಧಿಕ ಅಹಿರ್ ಸಮುದಾಯದ ಮಹಿಳೆಯರು (ಅಹಿರಾಣಿಗಳು) ಭಾಗವಹಿಸಿದ್ದರು. ಸಾಂಪ್ರದಾಯಿಕ ವರ್ಣರಂಜಿತ ಉಡುಪುಗಳನ್ನು ಧರಿಸಿ, ತೂಕದ ಚಿನ್ನದ ಹಾರಗಳು, ಒಡವೆಗಳನ್ನು ಮೈತುಂಬಾ ಧರಿಸಿ ಏಕಕಾಲದಲ್ಲಿ ಹೆಜ್ಜೆಹಾಕಿದ ನೃತ್ಯ ಪ್ರದರ್ಶನ ಅತ್ಯಂತ ಕಲಾಪೂರ್ಣವಾಗಿ ಮೂಡಿಬಂತು.

ಈ ಹಿಂದೆ ದ್ವಾರಕಾದಲ್ಲಿ ನಡೆದಿದ್ದ ‘ಅಹಿರ್ ರಾಸ್ ಉತ್ಸವ’ದಲ್ಲಿ ಬರೋಬ್ಬರಿ 51 ಸಾವಿರ ಮಹಿಳೆಯರು ಭಾಗವಹಿಸಿ ದಾಖಲೆ ಬರೆದಿದ್ದರೆ, ಈ ಬಾರಿ ರಾಜ್‌ಕೋಟ್‌ನಲ್ಲಿ ನಡೆದ ಉತ್ಸವದಲ್ಲೂ 21 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ತಮ್ಮ ಸಂಪ್ರದಾಯ ಹಾಗೂ ಒಗ್ಗಟ್ಟಿನ ಸಂದೇಶ ಸಾರಿದರು.

ಸಮುದಾಯದ ಏಕತೆ ಮತ್ತು ಸಂಸ್ಕೃತಿಯ ಅನಾವರಣ

ಕಾರ್ಯಕ್ರಮದ ಕುರಿತು ಮಾತನಾಡಿದ ಅಹಿರ್ ಸೇನಾ ಜಿಲ್ಲಾ ಮುಖ್ಯಸ್ಥ  ಭವೇಶ್ ಲೋಕಿಲ್, “ಅಹಿರ್ ಸಮುದಾಯದ ಶ್ರೀಮಂತ ಸಂಪ್ರದಾಯ ಹಾಗೂ ಏಕತೆಯನ್ನು ಕಾಪಾಡಿಕೊಳ್ಳುವ ಸದುದ್ದೇಶದಿಂದ ಈ ಭವ್ಯ ವಾರ್ಷಿಕ ಅಹಿರ್ ರಾಸ್ ಉತ್ಸವವನ್ನು ಆಯೋಜಿಸಲಾಗಿತ್ತು. ಸೌರಾಷ್ಟ್ರದ ಮೂಲೆಮೂಲೆಗಳಿಂದ ನಮ್ಮ ಸಹೋದರಿಯರು ಉತ್ಸಾಹದಿಂದ ಭಾಗವಹಿಸಿರುವುದು ಹೆಮ್ಮೆಯ ವಿಷಯ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಶಾಸಕ  ಉದಯ್ ಕಾಂಗಡ್  ಮಾತನಾಡಿ, “ಇದು ಕೇವಲ ನೃತ್ಯ ಉತ್ಸವವಲ್ಲ, ಬದಲಿಗೆ ಅಹಿರ್ ಸಮುದಾಯದ ಅನನ್ಯ ಸಂಸ್ಕೃತಿ ಮತ್ತು ಹೆಮ್ಮೆಯನ್ನು ಜಗತ್ತಿಗೆ ಸಾರುವ ಐತಿಹಾಸಿಕ ಕಾರ್ಯಕ್ರಮವಾಗಿದೆ. ನಮ್ಮ ಸಂಪ್ರದಾಯದ ಉಡುಪು ಹಾಗೂ ಸಾಂಪ್ರದಾಯಿಕ ಆಭರಣಗಳೊಂದಿಗೆ ಸಹೋದರಿಯರು ಪ್ರದರ್ಶಿಸಿದ ರಾಸ್ ನೃತ್ಯ ಅತ್ಯಂತ ಶ್ಲಾಘನೀಯವಾಗಿದೆ” ಎಂದು ಪ್ರಶಂಸಿಸಿದರು.

ಸಾವಿರಾರು ಮಹಿಳೆಯರು ಚಿನ್ನದ ಆಭರಣಗಳೊಂದಿಗೆ ಭಾಗವಹಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಇಡೀ ಕಾರ್ಯಕ್ರಮದ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಗೂ ಕಾವಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪೂರ್ಣಗೊಂಡಿತು.
#AhirRasUtsav #Rajkot #Gujaratis #GoldJewelleryDance #AhirSena #TraditionalDance #UdayakalaNews #GujaratNews #CulturalFestival #IndianCulture

Related Posts

Leave a Reply

Your email address will not be published. Required fields are marked *