Menu

ಬಾಂಗ್ಲಾದಲ್ಲಿ ಭಾರತೀಯ ಏರ್ ಆಂಬ್ಯುಲೆನ್ಸ್ ತುರ್ತು ಭೂಸ್ಪರ್ಶ:ವಿಮಾನದ ಬಾಗಿಲು ತೆರೆದ ಮಹಿಳಾ ರೋಗಿ ಸಾವು!

ಢಾಕಾ: ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಏರ್ ಆಂಬ್ಯುಲೆನ್ಸ್‌ನ (Air Ambulance) ಬಾಗಿಲು ದಿಢೀರ್ ತೆರೆದುಕೊಂಡ ಆತಂಕಕಾರಿ ಘಟನೆಯಲ್ಲಿ, ತುರ್ತು ಲ್ಯಾಂಡಿಂಗ್ ಮಾಡಿದ ಭಾರತೀಯ ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಗಂಭೀರ ಅನಾರೋಗ್ಯಪೀಡಿತ ಮಹಿಳಾ ರೋಗಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ವರದಿಯಾಗಿದೆ. ಮಾನವೀಯ ದೃಷ್ಟಿಯಿಂದ ಬಾಂಗ್ಲಾದೇಶ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ತುರ್ತು ಭೂಸ್ಪರ್ಶಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ರೋಗಿಯ ಜೀವ ಉಳಿಸಲು ಸಾಧ್ಯವಾಗಿಲ್ಲ.

ಆಗರ್ತಲಾದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನ

ಭಾರತದ ‘ಎಸ್ ಕೆಬಿ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಸೇರಿದ ವಿಟಿ-ಎಚ್‌ವೈಎ (VT-HYA) ನೋಂದಣಿತ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ90ಎ (Beechcraft King Air C90A) ಏರ್ ಆಂಬ್ಯುಲೆನ್ಸ್, 56 ವರ್ಷದ ಮಹಿಳಾ ರೋಗಿಯನ್ನು ಹೊತ್ತು ತ್ರಿಪುರಾದ ಅಗರ್ತಲಾದಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಹಾರಾಟ ನಡೆಸಿತ್ತು. ಸುಮಾರು 12,000 ಅಡಿ ಎತ್ತರದಲ್ಲಿ ವಿಮಾನವು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ವಿಮಾನ ಹಾರಾಟದ ಮಧ್ಯೆ ತಾಂತ್ರಿಕ ದೋಷದಿಂದಾಗಿ ವಿಮಾನದ ಬಾಗಿಲು ತೆರೆದುಕೊಂಡಿದ್ದು, ತಕ್ಷಣವೇ ಎಚ್ಚೆತ್ತ ಪೈಲಟ್‌ಗಳು ಹತ್ತಿರದ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು. ಅದರಂತೆ, ಮಧ್ಯಾಹ್ನ 1:40ರ ಸುಮಾರಿಗೆ ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Hazrat Shahjalal International Airport) ಏರ್ ಆಂಬ್ಯುಲೆನ್ಸ್ ಅನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಯಿತು.

ವಿಮಾನದಲ್ಲಿದ್ದವರು ಹಾಗೂ ದುರಂತದ ವಿವರ

ಈ ವಿಮಾನದಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಇಬ್ಬರು ಪೈಲಟ್‌ಗಳು, ಒಬ್ಬರು ರೋಗಿ, ವೈದ್ಯರು, ಪ್ಯಾರಾಮೆಡಿಕ್ ಸಿಬ್ಬಂದಿ ಹಾಗೂ ಇಬ್ಬರು ಸಹಚರರು (ಸಂಬಂಧಿಕರು) ಇದ್ದರು. ಮೃತ ಮಹಿಳೆಯನ್ನು ಅಂಜನಾ ಬೌಮಿಕ್ (56) ಎಂದು ಗುರುತಿಸಲಾಗಿದೆ. ತುರ್ತು ಲ್ಯಾಂಡಿಂಗ್ ನಂತರ ರೋಗಿಯನ್ನು ತಕ್ಷಣವೇ ಢಾಕಾದ ಕುರ್ಮಿತೊಲಾ ಮಲ್ಟಿಕೇರ್ ಸ್ಪೆಷಲೈಸ್ಡ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳಿದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಇತರ ಎಲ್ಲಾ ಸಿಬ್ಬಂದಿಗಳು ಹಾಗೂ ಸಹಚರರು ಸಂಪೂರ್ಣ ಸುರಕ್ಷಿತವಾಗಿದ್ದಾರೆ.

ಸಾವಿಗೆ ಅಸ್ಪಷ್ಟ ಕಾರಣ

ರೋಗಿಯ ನಿಖರವಾದ ಸಾವಿಗೆ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಅವರ ಸಾವು ವಿಮಾನದ ಬಾಗಿಲು ತೆರೆದುಕೊಂಡ ಆಘಾತದಿಂದ ಉಂಟಾದ ವೈದ್ಯಕೀಯ ಜಟಿಲತೆಯಿಂದ ಸಂಭವಿಸಿತೇ ಅಥವಾ ಈಗಾಗಲೇ ಇದ್ದ ಗಂಭೀರ ಆರೋಗ್ಯ ಸಮಸ್ಯೆಯಿಂದ ಸಂಭವಿಸಿತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನ ನಿಲ್ದಾಣದ ವಕ್ತಾರ ಎಂಡಿ ರಿಯಾಜ್ ಉದ್ದೀನ್ ಮಾತನಾಡಿ, ತಾಂತ್ರಿಕ ದೋಷದಿಂದ ಬಾಗಿಲು ತೆರೆದುಕೊಂಡಿದ್ದಾಗಿ ದೃಢಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಹಾರಾಟದ ನಿಯಮಗಳ ಪ್ರಕಾರ ಢಾಕಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಅಗತ್ಯವಿರುವ ಪೂರ್ವಾನುಮತಿಗಳು ತಕ್ಷಣಕ್ಕೆ ಸಿಗದಿದ್ದರೂ, ರೋಗಿಯ ಜೀವ ಉಳಿಸುವ ಸದುದ್ದೇಶದಿಂದ ಬಾಂಗ್ಲಾದೇಶದ ಅಧಿಕಾರಿಗಳು ಮಾನವೀಯ ಆಧಾರದ ಮೇಲೆ ತುರ್ತು ಲ್ಯಾಂಡಿಂಗ್‌ಗೆ ತ್ವರಿತವಾಗಿ ಅವಕಾಶ ಕಲ್ಪಿಸಿದರು. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಕೂಡಲೇ ಎಚ್ಚೆತ್ತುಕೊಂಡು, ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಎಲ್ಲಾ ರಾಜತಾಂತ್ರಿಕ ಹಾಗೂ ಕಾನೂನು ವಿಧಿವಿಧಾನಗಳನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಸದ್ಯ ವಿಮಾನ ಹಾಗೂ ಸಿಬ್ಬಂದಿಯ ಕ್ಲಿಯರೆನ್ಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.
#AirAmbulance #EmergencyLanding #BangladeshNews #DhakaAirport #AnjanaBhowmick #IndiaBangladesh #AviationNews #UdayakalaNews #MedicalEmergency

Related Posts

Leave a Reply

Your email address will not be published. Required fields are marked *