ಉದಯಕಾಲ ನ್ಯೂಸ್, ಶಿವಮೊಗ್ಗ: ಎಸ್‌ಐಆರ್ (SIR) ಪ್ರಕ್ರಿಯೆ ಅನಾಚಾರ ಹಾಗೂ ಮತಗಳ್ಳತನದ ವಿವಾದ ದೇಶಾದ್ಯಂತ ಮೊಳಗುತ್ತಿರುವ ಬೆನ್ನಲ್ಲೇ, ಶಿವಮೊಗ್ಗಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿ, ಕಾರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿದ ಆಘಾತಕಾರಿ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಬಿಎಸ್‌ಸಿ ಟೆಕ್ಸ್‌ಟೈಲ್ಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಆಗಮಿಸಿದ್ದರು. ಸಚಿವರ ಕಾರು ನಗರದ ಅಶೋಕ ವೃತ್ತದಿಂದ ಬಿ.ಎಚ್. ರಸ್ತೆಯ ಮೂಲಕ ಸಾಗಿಬರುತ್ತಿದ್ದಂತೆ, ಮುಂಚಿತವಾಗಿ ನಿಗಾ ವಹಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ರಸ್ತೆಗೆ ನುಗ್ಗಿ ಸಚಿವರ ಕಾರಿಗೆ ಮುತ್ತಿಗೆ ಹಾಕಿದರು.
ಕೈಯಲ್ಲಿ ಕಪ್ಪು ಬಾವುಟ ಹಾಗೂ ಕಪ್ಪು ಪಟ್ಟಿಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಚುನಾವಣಾ ವ್ಯವಸ್ಥೆಯ ಲೋಪಗಳ ವಿರುದ್ಧ ಉಗ್ರ ಘೋಷಣೆಗಳನ್ನು ಕೂಗಿದರು.
ಪೊಲೀಸರ ಹೈರಾಣು ಹಾಗೂ ದಿಢೀರ್ ಭದ್ರತೆ
ಇದು ಅತ್ಯಂತ ಅನಿರೀಕ್ಷಿತ ಪ್ರತಿಭಟನೆ ಆಗಿದ್ದರಿಂದ ಸ್ಥಳದಲ್ಲಿ ಬೆರಳೆಣಿಕೆಯಷ್ಟು ಪೊಲೀಸರು ಮಾತ್ರ ಕರ್ತವ್ಯದಲ್ಲಿದ್ದರು. ದಿಢೀರ್ ಬೆಳವಣಿಗೆಯಿಂದ ಕಂಗಾಲಾದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ, ಪ್ರತಿಭಟನಾಕಾರರನ್ನು ಸಚಿವರ ಕಾರಿನ ಹತ್ತಿರದಿಂದ ಚದುರಿಸಿ, ಅತ್ಯಂತು ಹೈಡ್ರಾಮಾದ ನಡುವೆ ಸಚಿವರ ವಾಹನವು ಮುಂದೆ ಸಾಗಲು ಅನುವು ಮಾಡಿಕೊಟ್ಟರು.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ದೇಶಾದ್ಯಂತ ವಿವಾದ ಸೃಷ್ಟಿಸಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಆಗಿರುವ ಗಂಭೀರ ಅಕ್ರಮಗಳು ಹಾಗೂ ಮತಗಳ್ಳತನವನ್ನು ಕೇಂದ್ರ ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಯಿತು ಎಂದು ಯುವ ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದರು.
ಈ ಅನಿರೀಕ್ಷಿತ ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತ ಸ್ಥಳೀಯ ಆಡಳಿತ ಹಾಗೂ ಪೊಲೀಸರು, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಭೇಟಿ ನೀಡಿದ ಕಾರ್ಯಕ್ರಮದ ಸುತ್ತಲೂ ಮತ್ತು ಇಡೀ ನಗರದಾದ್ಯಂತ ಪೊಲೀಸ್ ಭದ್ರತೆಯನ್ನು ತೀವ್ರವಾಗಿ ಹೆಚ್ಚಿಸಿದರು.
#Shivamogga #VSomanna #YouthCongress #BlackFlagProtest #SIR #VoteChori #UnionMinister #KarnatakaNews #UdayakalaNews

