Menu

ದೆಹಲಿ ಈಗ ನರಕಸದೃಶ ಜೈಲು, ಜ್ಞಾನೇಶ್​ ಕುಮಾರ್​ ರಕ್ಷಣೆಗೆ ಮೋದಿ ಸರ್ಕಾರ: ವಿಪಕ್ಷ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ!

ಉದಯಕಾಲ ನ್ಯೂಸ್, ನವದೆಹಲಿ: ದೇಶದಲ್ಲಿ ನಡೆದಿರುವ ‘ಮತ ಕಳ್ಳತನ’ಕ್ಕೆ ತಡೆ ಒಡ್ಡಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಸೋಮವಾರ ಇಂಡಿಯಾ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್‌ಗೆ ಬೃಹತ್ ಮೆರವಣಿಗೆ ನಡೆಸಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಚುನಾವಣಾ ಆಯೋಗದ ಧೋರಣೆಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ವಾಗ್ದಾಳಿ!

ದೆಹಲಿ ಒಂದು ನರಕಸದೃಶ ಜೈಲಿನಂತಾಗಿದೆ.ಕಳೆದ ನಾಲ್ಕೈದು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕರ ಎಲ್ಲಾ ಚಟುವಟಿಕೆಗಳನ್ನು ಹತ್ತಿಕ್ಕಲಾಗುತ್ತಿದೆ. ದೆಹಲಿಗೆ ಬರುವ ಜನರನ್ನು ತಡೆಯಲಾಗುತ್ತಿದ್ದು, ಇಡೀ ದೆಹಲಿ ನಗರವೇ ಒಂದು ಜೈಲಿನಂತೆ (Fortress) ಬದಲಾಗಿದೆ” ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
“ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಎಲ್ಲರೂ ಒಂದೆಡೆ ಇದ್ದು, ವಿರೋಧ ಪಕ್ಷಗಳು ಮತ್ತು ಜನತೆ ಮತ್ತೊಂದೆಡೆ ಇದ್ದಾರೆ. ದೆಹಲಿಯಲ್ಲಿ ಭಾರೀ ಪೊಲೀಸ್ ಪಡೆ ಹಾಗೂ ಭದ್ರತೆಯನ್ನು ನಿಯೋಜಿಸಿರುವುದು, ಪ್ರಧಾನಿ ಮೋದಿ ಅವರು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಮೇಲೆ ಆರ್‌ಎಸ್‌ಎಸ್, ಬಿಜೆಪಿ ಗೂಂಡಾಗಳ ದಾಳಿ: ರಾಷ್ಟ್ರ ರಾಜಧಾನಿಯಲ್ಲಿ ವಿರೋಧ ಪಕ್ಷಗಳ ಯುವಕರ ಮೇಲೆ ಹಾಗೂ ಪ್ರತಿಭಟನಾಕಾರರ ಮೇಲೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಗೂಂಡಾಗಳು ಹಲ್ಲೆ ನಡೆಸುತ್ತಿದ್ದು,ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ದೂರಿದರು.
“ಸರ್ಕಾರ ಏನೇ ತಂತ್ರಗಳನ್ನು ಮಾಡಿದರೂ, ಬೆದರಿಕೆ ಹಾಕಿದರೂ ನಾವು ಹಿಂದೆ ಸರಿಯುವುದಿಲ್ಲ. ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಈ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ” ಎಂದು ಸ್ಪಷ್ಟಪಡಿಸಿದರು.

ಸುಪ್ರೀಂ ಕೋರ್ಟಿಗೆ ಮೆರವಣಿಗೆ ಮತ್ತು ಸಿಜೆಐ ನಿರಾಕರಣೆ

ಮತಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ಇಂದು (ಅಕ್ಟೋಬರ್ 12) ಸುಪ್ರೀಂ ಕೋರ್ಟ್‌ಗೆ ಮೆರವಣಿಗೆಯಲ್ಲಿ ತೆರಳಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (Surya Kant) ಅವರಿಗೆ ಮನವಿ ಸಲ್ಲಿಸಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿತ್ತು.
ಆದರೆ, ತಮ್ಮ ಬೇಡಿಕೆಗಳ ಸಲ್ಲಿಕೆಗಾಗಿ ಸಿಜೆಐ ಅವರ ನೇರ ಭೇಟಿಗೆ ಇಂಡಿಯಾ ಕೂಟದ ನಾಯಕರು ಕೋರಿದ್ದ ಅನುಮತಿಯನ್ನು ಮುಖ್ಯ ನ್ಯಾಯಮೂರ್ತಿಗಳು ತಿರಸ್ಕರಿಸಿದ್ದರು. ಚುನಾವಣಾ ಅಕ್ರಮಗಳ ಕುರಿತ ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ, ನೇರ ಭೇಟಿಗೆ ಅವಕಾಶವಿಲ್ಲ ಹಾಗೂ ಈ ಕುರಿತು ಕಾನೂನುಬದ್ಧವಾಗಿ ಕೋರ್ಟ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸಿಜೆಐ ತಿಳಿಸಿದ್ದರು. ಇದರ ಬೆನ್ನಲ್ಲೇ ಇಂಡಿಯಾ ಮೈತ್ರಿಕೂಟದ ನಾಯಕರು ಬರಾಖಂಬಾ ರಸ್ತೆಯಿಂದ ಸುಪ್ರೀಂ ಕೋರ್ಟ್‌ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕೃತವಾಗಿ ಅರ್ಜಿ/ಮನವಿ ಸಲ್ಲಿಸಲು ಮುಂದಾಗಿದ್ದಾರೆ.
#RahulGandhi #DelhiProtest #SupremeCourt #CEC #GyaneshKumar #ElectionCommission #IndiaAlliance #SIR #VoteChori #DelhiNews #UdayakalaNews

Related Posts

Leave a Reply

Your email address will not be published. Required fields are marked *