ಮದುವೆಯಾಗಿ ಇಪ್ಪತ್ತು ದಿನಗಳಲ್ಲೇ ವ್ಯಕ್ತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆ.ದಿಬ್ಬದಹಳ್ಳಿಯಲ್ಲಿ ನಡೆದಿದೆ.
ಹೊಲದಿಂದ ಕರಿಬೇವು ಕಿತ್ತು ತರಲೆಂದು ಬೈಕ್‌ನಲ್ಲಿ ಕರೆದೊಯ್ದ ಪತಿ, ತನ್ನ ಸ್ನೇಹಿತನ ಜತೆ ಸೇರಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅನಿತಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಕೆ.ದಿಬ್ಬದಹಳ್ಳಿಯ ಅನಿತಾ (22) ಕೊಲೆಯಾದವರು. ಪತಿ ಮಾರೇಶ ಮತ್ತು ಸ್ನೇಹಿತ ಪೀತಾಂಬರಿ ಹಾಗೂ ಬಾಲಕಿ ಬಂಧಿತರು. ಆರೋಪಿ ಪತಿ ಹೊಲದಲ್ಲಿ ಒಂದು ದಿನ ಮೊದಲೇ ಲಿಂಬೆಹಣ್ಣು, ತೆಂಗಿನಕಾಯಿ, ಕುಂಕುಮ, ಬಳೆ ಸೇರಿ ನಾನಾ ವಸ್ತುಗಳನ್ನು ಇಟ್ಟಿದ್ದ. ಯಾರೋ ಹೊಲದಲ್ಲಿ ಮಾಟ ಮಂತ್ರ ಮಾಡಿದ್ದನ್ನು ಕಂಡು ಹೆದರಿ ಓಡಿ ಬಂದು ರೇಷ್ಮೆ ಮನೆಯ ಹೊಸ್ತಿಲಿಗೆ ಬಿದ್ದು ಅನಿತಾ ಮೃತಪಟ್ಟಿದ್ದಾಳೆಂದು ಕತೆ ಕಟ್ಟಿದ್ದ.
ಅನಿತಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಮೂರು ದಿನಗಳ ನಂತರ ಶವ ಪರೀಕ್ಷೆ ವರದಿ ಬಂದ ಬಳಿಕ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿ ಪತಿ ಮಾರೇಶ ಬಾಲಕಿಯ ಜತೆ ಕಳೆದ ನಾಲ್ಕು ವರ್ಷಗಳಿಂದ ಸಂಬಂಧವಿತ್ತು. ನನ್ನ ಮದುವೆಯಾಗುವುದಾಗಿ ಹೇಳಿ ಈಗ ಬೇರೆಯವಳನ್ನು ಮದುವೆಯಾಗಿದ್ದಿ, ನಿನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸು, ಇಲ್ಲವೇ ಏನಾದರೂ ಮಾಡು ಎಂದು ಬಾಲಕಿ ಪ್ರಚೋದಿಸಿದ್ದಳು ಎನ್ನಲಾಗಿದೆ.
ಆರೋಪಿ ಹೆಂಡತಿಯನ್ನು ಕೊಲ್ಲುವ ಸಂಚು ರೂಪಿಸಿ ಸ್ನೇಹಿತನಿಗೆ ಹೊಲಕ್ಕೆ ಬರುವಂತೆ ಮೊದಲೇ ತಿಳಿಸಿದ್ದ. ಹೆಂಡತಿ ಅನಿತಾಳನ್ನು ಬೈಕ್‌ನಲ್ಲಿ ಕರಿಬೇವು ತರೋಣವೆಂದು ಕರೆದೊಯ್ದು, ಹೊಲದಲ್ಲಿದ್ದ ರೇಷ್ಮೆ ಮನೆಯಲ್ಲಿ ಮಾರೇಶ ಮತ್ತು ಪೀತಾಂಬರಿ ಸೇರಿ ಕತ್ತು ಹಿಸುಕಿದ್ದೇವೆ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.


