Menu

PMO ಹೆಸರಲ್ಲಿ 4 ಕೋಟಿ ವಂಚನೆ: ನಕಲಿ ಅಧಿಕಾರಿಯ ಜಾಮೀನು ಅರ್ಜಿ ವಜಾ

ಪ್ರಧಾನ ಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು  ಕೋಟ್ಯಂತರ ರೂಪಾಯಿ ದೋಚಿ ಬಂಧಿತರಾಗಿರುವ  ವಿಜಯ್ ಗುಪ್ತಾ,  ಜಾಮಿನಿಗಾಗಿ ಸಲ್ಲಿಸಿದ್ದ ಈತನ ಅರ್ಜಿಯನ್ನು ದೆಹಲಿಯ ಪಟಿಯಾಲ ಹೌಸ್  ನ್ಯಾಯಾಲಯವು ವಜಾಗೊಳಿಸಿದೆ.

ಜಮ್ಮು ಮೂಲದ 'ಯಂಗ್ ಬೈಟ್ಸ್' ಎಂಬ ಸಂಸ್ಥೆಯ ಮಾಲೀಕ ವಿಜಯ್ ಗುಪ್ತಾ, ತಾನು PMOನ ಉನ್ನತ  ಅಧಿಕಾರಿಯೆಂದು ಬಿಂಬಿಸಿಕೊಂಡಿದ್ದ. ಸರ್ಕಾರಿ ಟೆಂಡರ್‌ಗಳು, ಉದ್ಯೋಗ ಮತ್ತು ವರ್ಗಾವಣೆಗಳನ್ನು ಕೊಡಿಸುವುದಾಗಿ ನಂಬಿಸಿ ಹಲವರಿಂದ4.06 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ್ದಾನೆ.  ಪ್ರಧಾನಮಂತ್ರಿಯವರು ವಿದೇಶ ಪ್ರವಾಸ ಕೈಗೊಳ್ಳುವಾಗಲೆಲ್ಲಾ ಈತ ತಾನೂ ಅದೇ ದೇಶಗಳಿಗೆ ತೆರಳಿ, ಅಲ್ಲಿನ ಹಿರಿಯ  ಅಧಿಕಾರಿಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಈ ಫೋಟೊಗಳನ್ನು ಭಾರತದಲ್ಲಿನ ತನ್ನ ವಂಚನೆಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದುದು ತನಿಖೆಯಲ್ಲಿ ಬಯಲಾಗಿದೆ. ಕಳೆದ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯ  ಈತನನ್ನು ಬಂಧಿಸಿತ್ತು.

ಬಂಧಿತ ವಿಜಯ್ ಗುಪ್ತಾ,  ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ವೈದ್ಯಕೀಯ ಕಾರಣಗಳನ್ನು ಮುಂದಿಟ್ಟು ಜಾಮೀನು ಪಡೆಯಲು ಹರಸಾಹಸ ಪಟ್ಟಿದ್ದನು. ಆದರೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಾಧೀಶ ಧೀರೇಂದ್ರ ರಾಣಾ  ಮನವಿಯನ್ನು  ತಳ್ಳಿಹಾಕಿದ್ದಾರೆ. ಪ್ರಕರಣದ ತನಿಖೆ ನಿರ್ಣಾಯಕ ಹಂತದಲ್ಲಿದ್ದು,
ಆರೋಪಿಯು ಹೊರಬಂದರೆ ಸಾಕ್ಷ್ಯ ನಾಶಪಡಿಸುವ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಗಳು ಹೆಚ್ಚಿವೆ ಎಂದು  ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಕ್ರಮ ಹಣವನ್ನು ತನ್ನ ಖಾತೆಗಳಿಗೆ ವರ್ಗಾಯಿಸಿಕೊಂಡು ಆದಾಯ ತೆರಿಗೆ ರಿಟರ್ನ್ಸ್‌ನಲ್ಲೂ ಮಾಹಿತಿ ಮುಚ್ಚಿಟ್ಟಿದ್ದ  ಆರೋಪಿಯ ಈ ದುಸ್ಸಾಹಸಕ್ಕೆ ನ್ಯಾಯಾಲಯ ಇದೀಗ ಚಾಟಿ ಬೀಸಿದೆ. ಈ ಘಟನೆಯು ದೇಶದ ಉನ್ನತ ಕಚೇರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಕಿಡಿಗೇಡಿಗಳ ವಿರುದ್ಧ ಎಚ್ಚರಿಕೆಯ ಗಂಟೆಯಾಗಿದೆ.

Related Posts

Leave a Reply

Your email address will not be published. Required fields are marked *