ಕುಮಾರಸ್ವಾಮಿ ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಅವರೇ ಹೇಳಬೇಕು. ಕುಮಾರಸ್ವಾಮಿ ಈ ಯೋಜನೆ ಮಾಡುವಾಗ ಡಿಸಿಎಂ ಆಗಿದ್ದು ಯಡಿಯೂರಪ್ಪನವರು. ಕನಿಷ್ಠ ಸೌಜನ್ಯಕ್ಕಾದರೂ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಭೆ ಮಾಡಲಿಲ್ಲ ಎಂದು ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಶಿವಕುಮಾರ್ ಕಿಕ್ ಬ್ಯಾಕ್ ಪಡೆದು ಕೇಂದ್ರದ ನಾಯಕರಿಗೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅನೇಕ ಬಾರಿ ಆರೋಪಿಸಿದ್ದಾರೆ. ಡಿಎಲ್ಎಫ್ ಗೆ ಜಾಗತಿಕ ಟೆಂಡರ್ ನೀಡುವಾಗ ಕುಮಾರಸ್ವಾಮಿ ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು? ಡಿಎಲ್ಎಫ್ ಕೊಟ್ಟ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಆದರೆ ಜಾಗತಿಕ ಮುಗ್ಗಟ್ಟಿನಲ್ಲಿ ಈ ಯೋಜನೆ ಮಾಡುವುದು ಅಸಾಧ್ಯ ಎಂದು ಡಿಎಲ್ಎಫ್ ಹಿಂದಕ್ಕೆ ಸರಿದಾಗ ಇವರು 400 ಕೋಟಿ ಹಣ ವಾಪಸ್ ನೀಡಿದಾಗ ಯಡಿಯೂರಪ್ಪನವರು ಎಷ್ಟು ಕಿಕ್ ಬ್ಯಾಕ್ ಪಡೆದರು? ಅದರಲ್ಲಿ ಅವರ ಕೇಂದ್ರದ ನಾಯಕರಿಗೆ ಎಷ್ಟು ಪಾಲು ನೀಡಿದರು? ಎಂದು ಪ್ರಶ್ನಿಸಿದರು.
ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಬಿಜೆಪಿ ನಾಯಕರು ಮಾಡಲು ಹೊರಟಿರುವುದು ಪಾದಯಾತ್ರೆಯಲ್ಲ, ತಾವು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ ಯಾತ್ರೆಯಾಗಿದೆ ಎಂದು ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರವಾಗಿ ಇಂದಿನ ಕರ್ಮಕಾಂಡಕ್ಕೆ ಬಿಜೆಪಿಯವರು ಕೂಡ ಪಾಲುದಾರರು. ಬಿಜೆಪಿ ಅನೇಕ ಮುಖಂಡರು ವೀರಾವೇಷದ ಭಾಷಣ ಮಾಡಿದ್ದಾರೆ. ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಅವರು ಮಾಡಿರುವ ಪಾಪಕ್ಕೆ ಈಗ ಮಾಡಬೇಕಾಗಿರುವುದು ಪ್ರಾಯಶ್ಚಿತ ಯಾತ್ರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ನಮ್ಮ ಪಾಪದ ಕೂಸನ್ನು ನೀವು ಯಾಕೆ ಹೊತ್ತುಕೊಂಡು ತಿರುಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅವರ ಪಾಪದ ಕೂಸು ವಿಕಲಚೇತನ ಪರಿಸ್ಥಿತಿಯಲ್ಲಿದೆ. ಅದನ್ನು ಮಾಡುವಾಗಲೇ ಕುಮಾರಸ್ವಾಮಿ ಅವರು ಕೈಕಾಲು ಮುರಿದಿದ್ದಾರೆ. ಕುಮಾರಸ್ವಾಮಿ ಅವರ ಪಾಪದ ಕೂಸನ್ನು ಮೊದಲು ಎತ್ತಿಕೊಂಡವರು ಯಡಿಯೂರಪ್ಪನವರು. ನಂತರ ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಎತ್ತಿಕೊಂಡರು. ಈಗ ಕಡೇಯದಾಗಿ ಆ ಕೂಸಿಗೆ ಚಿಕಿತ್ಸೆ ನೀಡಲು ನಾವು ಹೊತ್ತುಕೊಂಡಿದ್ದೇವೆ ಎಂದು ಲೇವಡಿ ಮಾಡಿದರು.
“ಯಡಿಯೂರಪ್ಪನವರು ನಮ್ಮ ಹಳೆಯ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ. ಒಬ್ಬ ನಾಯಕರಾದವರಿಗೆ ತನ್ನ ನಡೆ ನುಡಿ ಒಂದೇ ರೀತಿ ಇರಬೇಕು. ಜನರ ಮುಂದೆ ಮಾತನಾಡುವುದು, ಹಿಂದೆ ಮಾಡವ ಕೆಲಸ ಬೇರೆ ಬೇರೆಯಾಗಬಾರದು. ಕುಮಾರಸ್ವಾಮಿ ಅವರು ಇದಕ್ಕೆ ನಾನು ಸಹಿ ಹಾಕಿದ್ದೇನಾ ಎಂದು ಹೇಳಿದ್ದು, ನಾನು ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಅವರು ಎಷ್ಟು ಸಭೆ ನಡೆಸಿದ್ದಾರೆ. ನಮ್ಮ ಅಶೋಕಣ್ಣ ಬನ್ನಿ ಅಧಿವೇಶನಕ್ಕೆ ತೋರಿಸುತ್ತೇವೆ ಎಂದು ಕರೆಯುತ್ತಿದ್ದಾರೆ. ಅವರು ಏನು ತೋರಿಸುತ್ತಾರೋ ಅದಕ್ಕೆಲ್ಲ ನಾವು ಅಧಿವೇಶನದಲ್ಲಿ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ರೈತರ ಮೇಲೆ ಅನೇಕ ಬಾರಿ ಪ್ರೀತಿ ತೋರಿದ್ದಾರೆ. ಡಿಎಲ್ಎಫ್ ಯೋಜನೆಯಿಂದ ಹಿಂದೆ ಸರಿದಾಗ ಯಡಿಯೂರಪ್ಪನವರು ಮತ್ತೆ ಜಾಗತಿಕ ಟೆಂಡರ್ ಕರೆದಿದ್ದು ಯಾಕೆ? ನಿಮ್ಮ ಪಶ್ಚಾತಾಪ ಯಾತ್ರೆ ಆರಂಭಕ್ಕೂ ಮುನ್ನ ಈ ಪ್ರಶ್ನೆಗೆ ಉತ್ತರಿಸಬೇಕು. ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಾಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ ಎಂಬ ಆತಂಕದಲ್ಲಿ ಈ ಪಶ್ಚಾತ್ತಾಪ ಯಾತ್ರೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇತ್ತೀಚೆಗೆ ನಂಜುಂಡಸ್ವಾಮಿ ಅವರ ಪುತ್ರಿ ಬಿಡದಿಯಲ್ಲಿ ರಾಜಕಾರಣಿಗಳಿಗೆ ಹಸಿರು ಶಾಲು ಹಾಕಿಕೊಳ್ಳುವ ಅರ್ಹತೆ ಇಲ್ಲ ಎಂದು ಹೇಳಿದ್ದರು. ಈ ಮಾತನ್ನು ಅವರು ಹೇಳಿದ್ದು, ರೈತರ ಜೊತೆ ಪ್ರತಿಭಟನೆಗೆ ಕೂತು ನಾಟಕ ಮಾಡಿದವರಿಗೆ ಹಾಗೂ ರೈತರ ಶಾಲು ಹಾಕಿಕೊಂಡು ಯಾತ್ರೆ ಮಾಡಲು ಮುಂದಾಗಿರುವವರಿಗೆ ಎಂದರು.
ಯಡಿಯೂರಪ್ಪನವರ ನಂತರ ಸದಾನಂದ ಗೌಡರು ಬಂದು ಐದು ಟೌನ್ ಶಿಪ್ ಸಾಧ್ಯವಿಲ್ಲ, ಬಿಡದಿಯಲ್ಲಿ ಪ್ರಾಯೋಗಿಕ ಯೋಜನೆ ಮಾಡುತ್ತೇವೆ ಎಂದರು. ನಂತರ ಜಗದೀಶ್ ಶೆಟ್ಟರ್ ಬಂದು ಈ ಯೋಜನೆ ಮುಂದುವರಿಸಿ ಸಭೆ ಮಾಡಿದರು. ನಂತರ 2013ರಲ್ಲಿ ಕಾಂಗ್ರೆಸ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ನಂತರ 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಈ ಭಾಗದ ರೈತರು ಹೋಗಿ ಈ ಯೋಜನೆ ಕೈಬಿಡಿ ಎಂದು ಕೇಳಿಕೊಂಡಾಗ. ಇದು ನನ್ನ ಕನಸಿನ ಯೋಜನೆ ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಿಲ್ಲ. ಮಾಡೇ ತೀರುತ್ತೇವೆ ಎಂದು ಹೇಳಿದ್ದನ್ನು ಕುಮಾರಸ್ವಾಮಿ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಲ್ಲಿನ ರೈತರು ದೇವೇಗೌಡರ ಬಳಿ ಈ ಯೋಜನೆಯನ್ನು ಕೈಬಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡುತ್ತಾರೆ. ಆಗ ದೇವೇಗೌಡರು ಕಣ್ಣುಮುಚ್ಚಿ ಕುಳಿತರು. ನಾನು ಈ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಮಗ ಏನು ಹೇಳುತ್ತಾನೇ ಆ ರೀತಿ ಕೇಳಿಕೊಂಡು ಹೋಗಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಎಂದು ಹೇಳಿದರು.
2019ರಲ್ಲಿ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆಐಎಡಿಬಿಗೆ 1 ಸಾವಿರ ಎಕರೆ ಟೌನ್ ಶಿಪ್ ಭೂಮಿಯನ್ನು ಹಸ್ತಾಂತರ ಮಾಡಿದರು. ಆಗ ಕೈಗಾರಿಕಾ ಸಚಿವರಾಗಿದ್ದವರು ಜಗದೀಶ್ ಶೆಟ್ಟರ್. ಈ ಸಂದರ್ಭದಲ್ಲಿ ಕಿಕ್ ಬ್ಯಾಕ್ ಪಡೆದು ಈ ಭೂಮಿಯನ್ನು ಕೆಐಎಡಿಬಿಗೆ ನೀಡಿದ್ದಾರೆ ಎಂದು ಇದೇ ಕುಮಾರಸ್ವಾಮಿ ಆರೋಪಿಸಿದ್ದರು. ಹೀಗಾಗಿ ಬಿಜೆಪಿ ನಾಯಕರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಅವರೇ ಹೇಳಬೇಕು. ನಾಲ್ಕೈದು ವರ್ಷಗಳ ಹಿಂದೆ ಕೇವಲ 80 ಲಕ್ಷದಿಂದ 1 ಕೋಟಿವರೆಗೆ ಭೂಮಿ ಪಡೆದಿದ್ದರು. ಈಗ ನಮ್ಮ ಸರ್ಕಾರ 2.50 ಕೋಟಿವರೆಗೂ ಪರಿಹಾರ ನೀಡುತ್ತಿದೆ ಎಂದು ಹೇಳಿದರು.
ಅಶೋಕಣ್ಣ ಮಾತನಾಡುವ ಮುನ್ನ ಸಾಮಾನ್ಯ ಪ್ರಜ್ಞೆ ಇರಬೇಕು. ಈ ಯೋಜನೆ ಹಣವನ್ನು ಮೂರು ರಾಜ್ಯಗಳ ಚುನಾವಣೆಗೆ ಬಳಸಲಾಗುತ್ತಿದೆ ಎಂದು ಹೇಳಿದ್ದೀರಾ. ಈ ಯೋಜನೆ ಇವತ್ತೇ ಜಾರಿಯಾಗುತ್ತದೆಯೇ? ಈ ಟೌನ್ ಶಿಪ್ ಆಗಲು ಇನ್ನು 10 ವರ್ಷ ಬೇಕಾಗುತ್ತದೆ. ಬಿಜೆಪಿ ಜೆಡಿಎಸ್ ನವರು ಈ ಯೋಜನೆಯನ್ನು ಸರ್ಕಾರಿ ಜಾಗ ಸೇರಿಸಿ ಖಾಸಗಿಯವರಿಗೆ ನೀಡಿದ್ದರು. ಆದರೆ ನಾವು ಸರ್ಕಾರದಿಂದಲೇ ಈ ಯೋಜನೆ ಮಾಡುತ್ತಿದ್ದೇವೆ. ಯಡಿಯೂರಪ್ಪನವರ ಕಾಲದಲ್ಲಿನ ವರದಿ ಪ್ರಕಾರ ಈ ಟೌನ್ ಶಿಪ್ ನಲ್ಲಿ ಸರ್ಕಾರಕ್ಕೆ ವಾರ್ಷಿಕ 3,146 ಕೋಟಿ ಆದಾಯ ಬರುತ್ತದೆ ಎಂದು ತಿಳಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. 2020ರಲ್ಲಿ ಕಂದಾಯ ಮಂತ್ರಿಯಾಗಿದ್ದು ನೀವೇ ಅಲ್ಲವೇ ಎಂದು ಪ್ರಶ್ನಿಸಿದರು.
ಅನಿತಾ ಕುಮಾರಸ್ವಾಮಿ ಅವರ ಒಡೆತನದ ಜಮೀನಿನ ಬಗ್ಗೆ ಕೇಳಿದಾಗ, 36 ಎಕರೆ ಪೈಕಿ 31 ಎಕರೆ ಎಸ್ ಸಿ ಜಮೀನಾಗಿದ್ದು, ಪಿಟಿಸಿಎಲ್ ಕಾಯ್ದೆ ಅನ್ವಯವಾಗುತ್ತದೆ ಎಂದು ಜಿಬಿಐಟಿಗೆ ಅರ್ಜಿ ಬಂದಿದೆ. ಉಲಿದ 5 ಎಕರೆ ಹೇಗೆ ಮಂಜೂರಾಗಿದೆ ಎಂದು ತನಿಖೆ ಮಾಡಲಾಗುತ್ತಿದೆ. ಈ 36 ಎಕರೆ ಜಮೀನನ್ನು 2008ರಲ್ಲಿ ಕುಮಾರಸ್ವಾಮಿ ಅವರ ಬೇನಾಮಿ ಆಗಿರುವ ಅವರ ಅತ್ತೆ ಪಡೆದಿದ್ದರು. 2006ರಲ್ಲಿ ಈ ಯೋಜನೆ ನೋಟಿಫಿಕೇಷನ್ ಮಾಡುತ್ತಾರೆ. 2008ರಲ್ಲಿ ಜಮೀನು ಖರೀದಿ ಮಾಡುತ್ತಾರೆ. ಈಗ ಹಳಿ ರಿಯಲ್ ಎಸ್ಟೇಟ್ ಮಾಡುತ್ತಿರುವವರು ಯಾರು? ಈ ಭಾಗದಲ್ಲಿ ಡಿ ಕೆ ಶಿವಕುಮಾರ್, ಬಾಲಕೃಷ್ಣ ಜಮೀನು ಖರೀದಿ ಮಾಡಿದ್ದಾರಾ? 2023ರಲ್ಲಿ ಅವರು ಮಗಳ ಹೆಸರಿಗೆ (ಅನಿತಾ ಕುಮಾರಸ್ವಾಮಿ) ಗಿಫ್ಟ್ ಡೀಡ್ ಮಾಡುತ್ತಾರೆ. ಟೌನ್ ಶಿಪ್ ಮಾಡಲಾಗುವುದು ಎಂದು ತೀರ್ಮಾನವಾದ ಬಳಿಕ ಎಸ್ಸಿ ಎಸ್ಟಿ ಜಮೀನನ್ನು ಖರೀದಿ ಮಾಡುತ್ತಾರಲ್ಲಾ. ಪಿಟಿಸಿಎಲ್ ಕಾಯ್ದೆ, 79ಎ ಮತ್ತು ಬಿ ಕಾಯ್ದೆಗಳನ್ನು ಉಲ್ಲಂಘನೆ ಮಾಡಲಾಗಿದೆ. ಈ ಜಮೀನ್ನು ಸಾರ್ವಜನಿಕರಿಗೆ ನೀಡುತ್ತೇವೆ ಎಂದು ಹಳುತ್ತಾರಲ್ಲ. ನೀಡಲಿ, ನಾವೇ ಬಡವರಿಗೆ ನಿವೇಶನ ಮಾಡಿ ಹಂಚಿಕೆ ಮಾಡುತ್ತೇವೆ. ಇಲ್ಲಿ ಬೇನಾಮಿ ಜಮೀನು ಮಾಡಿಕೊಂಡಿರುವವರು ಯಾರು? ಶಿವಕುಮಾರ್ ಅವರ ಹೆಸರಿನಲ್ಲಿ 1 ಗುಂಟೆ ಜಾಗ ಇದೆಯಾ ತೋರಿಸಿ. ನನ್ನ ಹೆಸರಿನಲ್ಲಿ 1 ಎಕರೆ ಇದ್ದರೆ ತೋರಿಸಿ. ಮಾಧ್ಯಮಗಳ ಮುಂದೆ ಸತ್ಯಹಶ್ಚಂದ್ರರಂತೆ ಮಾತನಾಡುತ್ತಾರೆ ಎಂದು ತಿಳಿಸಿದರು.
ಈ 36 ಎಕರೆ ಖರೀದಿ ನನ್ನ ಗಮನಕ್ಕೆ ಬಂದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಅವರದು ಜಾಣ ಕುರುಡು, ಅವರಿಗೆ ಬೇಕಾದಾಗ ಅವರಿಗೆ ಕುರುಡಾಗುತ್ತದೆ ಎಂದು ತಿಳಿಸಿದರು.
ನಿಖಿಲ್ ಅವರ ಹೆಸರಿನಲ್ಲಿ ಇದೆಯೇ ಎಂದು ಕೇಳಿದಾಗ,“ನಿಖಿಲ್ ಅವರ ಹೆಸರಿನಲ್ಲೂ 5 ಎಕರೆ ಜಾಗ ಇದೆ. ಇದನ್ನು ಕುಮಾರಸ್ವಾಮಿ ಅವರೇ ಬೇರೆಯವರಿಗೆ ಮಂಜೂರು ಮಾಡಿರಬೇಕು. ಅವರು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ಹೋದಾಗ ಅವರನ್ನು ಎತ್ತಾಕಿಕೊಂಡು ಬಂದು ನಿಖಿಲ್ ಕುಮಾರಸ್ವಾಮಿ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ ಎಂದರು.
ಈ ಯೋಜನೆ ಕೈಬಿಟ್ಟರೆ 5 ಎಕರೆ ಜಾಗವನ್ನು ಜನರಿಗೆ ನೀಡುತ್ತಾರಂತೆ ಎಂದು ಕೇಳಿದಾಗ, ಅವರ ಜಾಗ ಬೇನಾಮಿ ಹಾಗೂ ಪಿಟಿಸಿಎಲ್ ಕಾಯ್ದೆ ಆಗಿರುವುದರಿಂದ 35 ಎಕರೆ ಭೂಮಿಯಲ್ಲಿ ನಿವೇಶನ ಮಾಡಲು ತೀರ್ಮಾನಿಸುತ್ತಿದ್ದೇವೆ. ಆ ಜಾಗವನ್ನು ಸರ್ಕಾರವೇ ಪಡೆದು ಹೋರಾಟ ಮಾಡುತ್ತಿರುವ ರೈತರಿಗೆ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.
ನಿಮ್ಮ ಪಕ್ಷದಲ್ಲೇ ಒಮ್ಮತದ ನಿಲುವಿಲ್ಲ ಎಂದು ಕೇಳಿದಾಗ, ಮಾಧ್ಯಮಗಳು ಏಕಾಏಕಿ ಕೇಳಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದನ್ನು ನೋಡಿದಾಗ ಆ ರೀತಿ ಹೇಳಿರುತ್ತಾರೆ. ನಾನು ಮಾಧ್ಯಮಗಳ ಮುಂದೆ ಸಂತ್ಯಾಂಶ ಬಹಿರಂಗಪಡಿಸುವವರೆಗೂ ಎಲ್ಲರೂ ಅದನ್ನೇ ಭಾವಿಸಿದ್ದರು. ನಾನು ಸತ್ಯಾಂಶ ಹೇಳಿದ ಬಳಿಕ ಕುಮಾರಸ್ವಾಮಿ ಅವರ ಬೂಟಾಟಿಕಿ ಜನರಿಗೆ ಅರ್ಥವಾಗಿದೆ. ಮಾಹಿತಿ ಕೊರತೆಯಿಂದ ಕೆಲವು ನಾಯಕರು ಹೇಳಿರಬಹುದು ಎಂದರು.


