Menu

ಸಮಸ್ಯೆ ನಿವಾರಣೆಗಾಗಿ ವಿಶೇಷ ಪೂಜೆ: ಮಹಿಳೆಯ ಒಡವೆ, ಹಣ ದೋಚಿ ಫೇಕ್‌ ಸ್ವಾಮೀಜಿ ಎಸ್ಕೇಪ್‌

ಮಗಳ ವೈವಾಹಿಕ ಬದುಕಿನಲ್ಲಿ ಎದುರಾಗಿರುವ ಸಮಸ್ಯೆಗಳನ್ನು ವಿಶೇಷ ಪೂಜೆ ಮೂಲಕ ಪರಿಹರಿಸುವುದಾಗಿ ನಂಬಿಸಿ ಸ್ವಾಮೀಜಿ ಎಂದು ಹೇಳಿಕೊಂಡ ವ್ಯಕ್ತಿ 37 ವರ್ಷದ ಮಹಿಳೆಯಿಂದ 43 ಗ್ರಾಂ ಚಿನ್ನಾಭರಣ ಹಾಗೂ 1.3 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಂಚನೆಗೊಳಗಾದ ಗೀತಾ ಎಂಬವರು ಈ ಸಂಬಂಧ ದೂರು ನೀಡಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೀತಾ ಅವರ ಮಗಳು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಪರಿಚಯದವರೊಬ್ಬರು ಗೀತಾ ಅವರಿಗೆ ಶಿವಕಾಲಿ ಅಲಿಯಾಸ್ ನಿತಿನ್ ಎಂಬಾತನ ಪರಿಚಯ ಮಾಡಿಕೊಟ್ಟಿದ್ದರು. ಅವನಿಗೆ ಆಧ್ಯಾತ್ಮಿಕ ಶಕ್ತಿಗಳಿದ್ದು, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಎಂದು ನಂಬಿಸಿದ್ದರು. ಗೀತಾ ಅವರು ಆರೋಪಿಯನ್ನು ಸಂಪರ್ಕಿಸಿದಾಗ, ನಿಮ್ಮ ಮಗಳ ಮೇಲೆ ಜೀವಕ್ಕೆ ಕಂಟಕ ತರುವಂತಹ ಮಾಟಮಂತ್ರ ಮಾಡಿಸಲಾಗಿದೆ ಎಂದು ಹೆದರಿಸಿದ್ದನು.

ಮಗಳ ಮೇಲಿನ ಮಾಟ ಮಂತ್ರ ದೋಷ ಪರಿಹಾರಕ್ಕೆ ಜೂನ್ 26 ರಂದು ಸಂಜೆ ಶಿವಕಾಲಿ, ಗೀತಾ ಅವರ ಮನೆಗೆ ಬಂದಿದ್ದ. ಪೂಜೆ ಮಾಡುವಾಗ ಮನೆಯಲ್ಲಿ ಬೇರೆ ಯಾರೂ ಇರಬಾರದು ಎಂದು ಸೂಚನೆ ನೀಡಿದ್ದ. ಮನೆಯಲ್ಲಿ ನಿಂಬೆಹಣ್ಣು, ಬೂದಿ, ಅರಿಶಿನ ಹಾಗೂ ಮೆಂತ್ಯ ಕಾಳುಗಳನ್ನು ಬಳಸಿ ಮಂತ್ರಗಳನ್ನು ಪಠಿಸುತ್ತಾ ಪೂಜೆ ಆರಂಭಿಸಿದ್ದ.

ಮಗಳ ದೋಷ ನಿವಾರಣೆಯಾಗಬೇಕಾದರೆ ಮನೆಯಲ್ಲಿರುವ ಚಿನ್ನ ಹಾಗೂ ನಗದು ತಂದು ಪೂಜೆಗೆ ಇಡಬೇಕು ಎಂದು ಆದೇಶಿಸಿದ್ದ. ಗೀತಾ, ಮನೆ ನವೀಕರಣಕ್ಕಾಗಿ ಇಟ್ಟಿದ್ದ 1.3 ಲಕ್ಷ ರೂ. ಹಾಗೂ 43 ಗ್ರಾಂ ತೂಕದ ಚಿನ್ನದ ಸರ, ಬಳೆ ಮತ್ತು ಉಂಗುರಗಳನ್ನು ತಂದು ಆತ ಹೇಳಿದಂತೆ ಬಟ್ಟೆಯ ಗಂಟಿನಲ್ಲಿ ಇಟ್ಟಿದ್ದರು.

ಪೂಜೆ ಮಾಡುವ ನೆಪದಲ್ಲಿ ಆರೋಪಿ ಶಿವಕಾಲಿ, ಬ್ಯಾಗ್‌ನಿಂದ ಬೂದಿ ತೆಗೆದು ಗೀತಾಮುಖಕ್ಕೆ ಎರಚಿದ್ದಾನೆ. ಬಳಿಕ ಅವರ ತಲೆಯನ್ನು ಬಗ್ಗಿಸಿ ಬೆನ್ನಿನ ಮೇಲೆ ಜೋರಾಗಿ ಹೊಡೆದಿದ್ದಾನೆ. ಗೀತಾ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. 30 ನಿಮಿಷಗಳ ನಂತರ ಅವರಿಗೆ ಪ್ರಜ್ಞೆ ಬಂದಾಗ ಸ್ವಾಮೀಜಿ ಹಾಗೂ ಪೂಜೆಯಿಟ್ಟಿದ್ದ ಎಲ್ಲಾ ಒಡವೆ, ನಗದು ನಾಪತ್ತೆಯಾದೆ.

ಅದೇ ದಿನ ಸಂಜೆ ಗೀತಾ ಅರುಣೋದಯ ಆಸ್ಪತ್ರೆಯ ಬಳಿ ಆರೋಪಿ ಶಿವಕಾಲಿಯನ್ನು ಕಂಡು, ಒಡವೆ ಹಾಗೂ ಹಣದ ಬಗ್ಗೆ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಆಭರಣಗಳನ್ನು ನಿಮ್ಮದೇ ಮನೆಯಲ್ಲಿರುವ ಬಟ್ಟೆಯ ಗಂಟಿನಲ್ಲಿ ಕಟ್ಟಿ ಇಡಲಾಗಿದೆ. ಅದನ್ನು ಎರಡು ದಿನ ಯಾರೂ ಮುಟ್ಟಬಾರದು. ಮುಂಚಿತವಾಗಿ ಬಿಚ್ಚಿದರೆ ನೀನು ರಕ್ತ ವಾಂತಿ ಮಾಡಿಕೊಂಡು ಸತ್ತುಹೋಗುತ್ತೀಯಾ ಎಂದು ಭಯ ಹುಟ್ಟಿಸಿದ್ದಾನೆ.

ಗೀತಾ ಮನೆಗೆ ಮರಳಿ ಎರಡು ದಿನ ಆ ಗಂಟನ್ನು ಬಿಚ್ಚದೆ ಇಟ್ಟಿದ್ದಾರೆ. ಎರಡು ದಿನಗಳ ನಂತರ ಅನುಮಾನ ಬಂದು ಗಂಟನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಬರೀ ಹುಣಸೆಹಣ್ಣು ಇರುವುದು ಕಂಡುಬಂದಿದೆ. ತಕ್ಷಣ ಆತನ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ನಕಲಿ ಸ್ವಾಮೀಜಿ ಶಿವಕಾಲಿ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *