Menu

ಜಿಬಿಎ ವ್ಯಾಪ್ತಿಗೆ 500 ಎಕರೆ ಎಲೆ ಮಲ್ಲಪ್ಪ ಶೆಟ್ಟಿ ಕೆರೆ

ಪೂರ್ವ ಬೆಂಗಳೂರಿನ ಜೀವನಾಡಿಯಾಗಿರುವ ಬೃಹತ್ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಸಂರಕ್ಷಣೆಯ ಹೊಣೆಯನ್ನು ರಾಜ್ಯ ಸರ್ಕಾರವು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.

500 ಎಕರೆ ವಿಸ್ತೀರ್ಣದ ಈ ಕೆರೆ, ಇದುವರೆಗೆ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿದ್ದು, ಅನುದಾನದ ಕೊರತೆಯಿಂದಾಗಿ ಸೂಕ್ತ ನಿರ್ವಹಣೆ ಕಾಣದೆ ಸೊರಗಿತ್ತು. ಕೆರೆಯ ಪುನಶ್ಚೇತನ, ಭದ್ರತೆ, ಬೇಲಿ ನಿರ್ಮಾಣ ಹಾಗೂ ವಾರ್ಷಿಕ ನಿರ್ವಹಣೆಗಾಗಿ  20 ಕೋಟಿ ರೂಪಾಯಿಗೂ ಹೆಚ್ಚಿನ ಅಗತ್ಯವಿದೆ. ಸಣ್ಣ ನೀರಾವರಿ ಇಲಾಖೆಯ ಬಳಿ ಇಷ್ಟೊಂದು ಮೊತ್ತದ ಅನುದಾನದ ಕೊರತೆ ಇರುವ ಹಿನ್ನೆಲೆಯಲ್ಲಿ, ಅಗತ್ಯ ಸಿಬ್ಬಂದಿ ಮತ್ತು ಸುಸಜ್ಜಿತ ಯಂತ್ರೋಪಕರಣಗಳನ್ನು ಹೊಂದಿರುವ ಜಿಬಿಎಗೆ ಕೆರೆಯನ್ನು ವರ್ಗಾಯಿಸುವುದು ಸೂಕ್ತ ಎಂದು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಜೂನ್ ತಿಂಗಳಲ್ಲಿ ಆರಂಭವಾಗಿರುವ ಈ ಪ್ರಕ್ರಿಯೆ ಆಗಸ್ಟ್ ವೇಳೆಗೆ ಸಂಪೂರ್ಣ ಜಾರಿಗೆ ಬರಲಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸೂಚನೆಯಂತೆ 9 ಕಿ.ಮೀ. ಉದ್ದದ ಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದುವರೆಗೆ 7 ಕಿ.ಮೀ. ಕೆಲಸ ಪೂರ್ಣಗೊಂಡಿದೆ. ಆದಾಗ್ಯೂ, ಕೆರೆಯ ಭೂಮಿ ಹಾಗೂ ಬಫರ್ ವಲಯದ ಮೇಲಿನ ಅತಿಕ್ರಮಣ, ಸ್ಮಶಾನಕ್ಕೆ ದಾರಿ ಮಾಡಿಕೊಡುವ ನೆಪದಲ್ಲಿ ನಡೆಯುತ್ತಿರುವ ಬಿಲ್ಡರ್‌ಗಳ ಅಕ್ರಮ ಲಾಬಿ ಹಾಗೂ
ಒಳಚರಂಡಿ ನೀರು ನೇರವಾಗಿ ಕೆರೆಗೆ ಹರಿಯುತ್ತಿರುವ ಸಮಸ್ಯೆಗಳು ಕೆರೆಯ ಅಸ್ತಿತ್ವಕ್ಕೆ ಮಾರಕವಾಗಿ ಪರಿಣಮಿಸಿವೆ.

ಈ ಕೆರೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ, ಇದು ಬೆಂಗಳೂರಿನ ಎರಡನೇ ಪಕ್ಷಿಧಾಮವಾಗಿ ಹೊರಹೊಮ್ಮುವ  ಸಾಮರ್ಥ್ಯ ಹೊಂದಿದೆ. ನೂರಾರು ಅಪರೂಪದ ವಲಸೆ ಪಕ್ಷಿಗಳು ಇಲ್ಲಿ ನೆಲೆ ಕಂಡುಕೊಂಡಿವೆ. ಜಿಬಿಎಗೆ ಅಧಿಕಾರ  ಹಸ್ತಾಂತರವಾದ ನಂತರವಾದರೂ ಕೆರೆ ತನ್ನ ಹಳೆಯ ವೈಭವವನ್ನು ಮರಳಿ ಪಡೆಯುತ್ತದೆಯೇ ಎಂಬುದು ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ,ಪರಿಸರ ಪ್ರೇಮಿಗಳ ದೀರ್ಘಕಾಲದ ಬೇಡಿಕೆಗೆ ಈ ಹಸ್ತಾಂತರ ಒಂದು ಹೊಸ ಆಶಾಕಿರಣವಾಗಿದೆ.

Related Posts

Leave a Reply

Your email address will not be published. Required fields are marked *