ಉದಯಕಾಲ ನ್ಯೂಸ್, ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ವೃಂದಾವನದ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕಾಗಿ ಬರೋಬ್ಬರಿ 5 ಕೋಟಿ ಹಣ ಪಡೆದಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ಕೊಹ್ಲಿ ಅವರ ಅಧಿಕೃತ ವಕ್ತಾರರು ಇದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ಅಧ್ಯಕ್ಷರಾದ ದಿನೇಶ್ ಶರ್ಮಾ (ಫಲಹರಿ ಮಹಾರಾಜ್) ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದಿದ್ದಾರೆನ್ನಲಾದ ಪತ್ರದಲ್ಲಿ, ರಾಜಸ್ಥಾನ ಮೂಲದ ಖಾಸಗಿ ಕಂಪನಿಯೊಂದು ವಿರಾಟ್ ಕೊಹ್ಲಿಯನ್ನು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಕರೆತರಲು 5 ಕೋಟಿ ರೂ. ಖರ್ಚು ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಕೊಹ್ಲಿ ವಕ್ತಾರ ಸ್ಪಷ್ಟನೆ
ಈ ಕುರಿತು ಸ್ಪಷ್ಟನೆ ನೀಡಿರುವ ವಿರಾಟ್ ಕೊಹ್ಲಿ ಅವರ ಅಧಿಕೃತ ವಕ್ತಾರರು, “ದಿನೇಶ್ ಶರ್ಮಾ ಮಾಡಿರುವ ಈ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದೆ. ವಿರಾಟ್ ಕೊಹ್ಲಿ ಅವರು ಪ್ರೇಮಾನಂದ ಮಹಾರಾಜ್ ಅವರ ಮೇಲಿರುವ ಅಚಲ ನಂಬಿಕೆ ಮತ್ತು ಗಾಢವಾದ ಗೌರವದಿಂದ ಮಾತ್ರ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ ವಿನಃ ಇದರ ಹಿಂದೆ ಯಾವುದೇ ಹಣದ ವ್ಯವಹಾರವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ದಂಪತಿ ಮೊಟ್ಟಮೊದಲ ಬಾರಿಗೆ 2023ರ ಜನವರಿಯಲ್ಲಿ ತಮ್ಮ ಮಗಳು ವಾಮಿಕಾ ಜೊತೆ ವೃಂದಾವನಕ್ಕೆ ತೆರಳಿ ಪ್ರೇಮಾನಂದ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದರು. ನಂತರದ ದಿನಗಳಲ್ಲೂ ಹಲವು ಬಾರಿ (ವಿಶೇಷವಾಗಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸಂದರ್ಭದಲ್ಲೂ ಸೇರಿದಂತೆ) ಆಶ್ರಮಕ್ಕೆ ಭೇಟಿ ನೀಡಿ ಮಹಾರಾಜ್ ಅವರೊಂದಿಗೆ ಆಧ್ಯಾತ್ಮಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಭೇಟಿ ವೇಳೆ ಪ್ರೇಮಾನಂದ ಮಹಾರಾಜ್ ಅವರು ದಂಪತಿಗೆ ತಮ್ಮ ದೈನಂದಿನ ಕೆಲಸವನ್ನು ಸೇವೆಯಂತೆ ಭಾವಿಸಿ ಮಾಡಬೇಕು, ಜೀವನದಲ್ಲಿ ಎಷ್ಟೇ ಯಶಸ್ಸು ಸಿಕ್ಕರೂ ವಿನಮ್ರರಾಗಿರಬೇಕು ಮತ್ತು ದೇವರ ಮೇಲೆ ನಂಬಿಕೆ ಇಡಬೇಕು ಎಂದು ಬೋಧಿಸಿದ್ದರು.
ಸದ್ಯ ಯಾವುದೇ ಅಧಿಕೃತ ಹಾಗೂ ನೈಜ ಸಾಕ್ಷ್ಯಗಳಿಲ್ಲದೆ ಹಬ್ಬಿರುವ ಈ 5 ಕೋಟಿ ರೂ. ಹಣದ ವ್ಯವಹಾರದ ವೃತ್ತಾಂತವನ್ನು ವಿರಾಟ್ ಕೊಹ್ಲಿ ತಂಡವು ತಳ್ಳಿಹಾಕಿದ್ದು, ಇದು ಕೇವಲ ಭಕ್ತರ ಮತ್ತು ಗುರುಗಳ ನಡುವಿನ ನಂಬಿಕೆಗೆ ಮಸಿ ಬಳೆಯುವ ಯತ್ನ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.
#ViratKohli #PremanandMaharaj #Udayakala #AnushkaSharma #Vrindavan #CricketNews #ViralNews #DineshSharma


