ಭಕ್ತಿಯೇ ಜಾತಿ, ಕರ್ಮವೇ ಧರ್ಮ ಎಂದು ಸಾರಿದ ಏಕೈಕ ಧರ್ಮ, ವೀರಶೈವ ಧರ್ಮ. ವೀರಶೈವ ಲಿಂಗಾಯತರು ತಾವು ಒಗ್ಗಟ್ಟಾಗಿದ್ದರೆ ಸಾಲದು. ಇಡೀ ರಾಜ್ಯವನ್ನು ಎಲ್ಲಾ ಸಮಾಜಗಳನ್ನು ಒಗ್ಗೂಡಿಸಬೇಕು. ಇದು ನಿಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ನೀಡಿದರು.
ಅವರು ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವದ ಮೊದಲ ಸಂಸತ್ತನ್ನು ಪರಿಚಯಿಸಿದ್ದು ಬಸವಣ್ಣನವರು. ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ವೀರಶೈವ ಲಿಂಗಾಯತ ಧರ್ಮ. ನಾನು ಇಲ್ಲಿರುವ ಎಲ್ಲಾ ಮಠಾಧೀಶರನ್ನು ಕೇಳಿಕೊಳ್ಳುವುದು ಇಷ್ಟೇ. ಮಾನವ ಧರ್ಮದ ಪ್ರತಿಪಾದನೆಯಿಂದಲೇ ಮಠಗಳಿಗೆ ಶಕ್ತಿ, ಬಲ ಬರುತ್ತದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸಾರಿದ ವೀರಶೈವ ಧರ್ಮವನ್ನು ಕಾಪಾಡಬೇಕು ಎಂದು ಹೇಳಿದರು.
ವೀರಶೈಧರ್ಮದ ಆರ್ಥಿಕವಾಗಿ ಸಬಲರಾಗಿರುವ ಮಠಗಳು ಸರ್ಕಾರಕ್ಕೆ ಸರಿಸಮನಾಗಿ ಸಮಾಜದ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಸಂಸ್ಕಾರ, ಶಿಕ್ಷಣ, ಜ್ಞಾನ, ಅಕ್ಷರದಾಸೋಹವನ್ನು ಮಾಡುತ್ತಿದೆ. ಇಂಥ ಅನನ್ಯ ಕಾರ್ಯದಲ್ಲಿ ತೊಡಗಿರುವ ಎಲ್ಲ ಮಠಗಳಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು ಎಂದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಹೊಂದಿರುವುದು ಲಿಂಗಾಯತ ಮಠಗಳು. ಪ್ರಪಂಚದ ನಾನಾ ಭಾಗಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬಿ.ಡಿ ಜತ್ತಿಯವರು ಪಂಚಾಯಿತಿ ಸದಸ್ಯತ್ವದಿಂದ- ರಾಷ್ಟ್ರಪತಿಯಂಥ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರು ಎನ್ನುವುದನ್ನು ಸ್ಮರಿಸಿಕೊಳ್ಳಬೇಕು. ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಅರಿವಿನಲ್ಲಿ ಬೆಳಕು, ಕಾಯಕದಲ್ಲಿ ಗೌರವವಿದೆ, ದಾಸೋದಲ್ಲಿ ಮಾನವೀಯತೆ ಇದೆ ಎಂದು ಸಾರಿದ್ದು ಲಿಂಗಾಯತ ಧರ್ಮ. ನೀವು ಜಾತಿ ಬೇಡ ಅಂದರೂ ಜಾತಿಗೆ ನೀವು ಬೇಕಾಗುತ್ತದೆ ಎಂದು ಹೇಳಿದರು.
ಹುಟ್ಟುವಾಗ ಯಾರೂ ಕೂಡ ಇಂಥ ಜಾತಿಯಲ್ಲೇ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಕೊನೆಗೆ ಮಠ ಬೇಡ, ಧರ್ಮ ಬೇಡ ಎಂದು ಹೇಳುವವರು ಇದ್ದಾರೆ. ಮಗುವಿಗೆ ಮೂಗು ಚುಚ್ಚುವಾಗ, ಕಿವಿ ಚುಚ್ಚುವಾಗ, ನಾಮಕರಣ ಮಾಡುವಾಗ ಯಾವುದೋ ಒಂದು ಸಿದ್ದಾಂತ, ಧರ್ಮ ಬರಲೇಬೇಕು. ಸತ್ತಾಗ ಮಣ್ಣು ಮಾಡಬೇಕೋ, ಅಗ್ನಿಸ್ಪರ್ಷ ಮಾಡಬೇಕು ಎಂದು ತೀರ್ಮಾನಿಸುವುದು ಧರ್ಮ ಎಂದು ವಿವರಿಸಿದರು.
ನನಗೆ ಅರಿವು ಕೊಟ್ಟುವರು ವೀರ ಗಂಗಾಗಧರ ಅಜ್ಜಯ್ಯ. ನಾನು ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದಾಗ ಬೇಕಾದಷ್ಟು ಟೀಕೆಗಳು ಬಂದವು. ರಾಷ್ಟ್ರದ ಅನೇಕ ನಾಯಕರು, ನ್ಯಾಯವಾದಿಗಳು ಈ ಬಗ್ಗೆ ಕೇಳಿದರು. ಎಲ್ಲರಿಗೂ ಅಜ್ಜಯ್ಯನ ಶಕ್ತಿಯ ಬಗ್ಗೆ ಹೇಳಿದ್ದೇನೆ. ಪ್ರಚಾರಕ್ಕಾಗಿ ನನ್ನ ಅಜ್ಜನ ಹೆಸರನ್ನು ಬಳಸುವುದಕ್ಕೆ ನಾನು ತಯಾರಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಭಕ್ತಿಯನ್ನು, ಆಶೀರ್ವಾದವನ್ನು ಅನುಭವಿಸಬೇಕು ಎಂದು ಹೇಳಿದರು.
ನಾನು ಬಸವಣ್ಣನವರ ಹಾದಿಯಲ್ಲಿ, ಪ್ರಜಾಸವೇಕನಾಗಿ ನಡೆಯುತ್ತಿದ್ದೇನೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ಬೇರೆಯವರ ಕೆಲಸಗಳ ಬಗ್ಗೆ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಹೊರ ಊರುಗಳಿಂದ ಬಂದ ಮಠಾಧೀಶರು, ಭಕ್ತರು ಉಳಿದುಕೊಳ್ಳಲು ಜಾಗ ಬೇಕು ಅಂತ ನೀವೆಲ್ಲಾ ಮನವಿ ಮಾಡಿದ್ದೀರಿ. ಹೊರವಲಯದಲ್ಲಿ ಇದಕ್ಕಾಗಿ ಎರಡು ಎಕರೆ ಜಾಗ ಕೊಡುತ್ತೇನೆ. ವೀರಗಂಗಾಧರ ಹೆಸರು ಇಡುತ್ತೀರೋ, ಬೇರೆ ಯಾರ ಹೆಸರು ಇಡುತ್ತೀರೋ ನಿಮಗೆ ಬಿಟ್ಟ ವಿಚಾರ. ಅವರ ಆಶಯವನ್ನು ಜಾರಿ ಮಾಡಿ. ಜಾಗ ನಮ್ಮದು. ಕಟ್ಟಡ ನಿಮ್ಮದು ಎಂದರು.
ಕಾಲ, ಸಮಸ್ಯೆ ಬದಲಾಗಬಹುದು. ಮೌಲ್ಯ ಬದಲಾಗಬಾರದು. ಉಪಕಾರ ಸ್ಮರಣೆ ಇರಬೇಕು. ನುಡಿದರೆ ಮುತ್ತಿನ ಹಾರದಂತೆ ಇರಬೇಕು. ಲಿಂಗ ಮೆಚ್ಚುವಂತಿರಬೇಕು ಎಂದಿದ್ದಾರೆ ಬಸವಣ್ಣನವರು. ಕಾಯಕವೇ ಕೈಲಾಸ ಅಂತ ನಂಬಿದ್ದೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಿಮ್ಮನ್ನು ರಕ್ಷಣೆ ಮಾಡುವ ವ್ಯಕ್ತಿ ನನಗಿಂತ ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಧರ್ಮದ ತತ್ವ ನಾವೆಲ್ಲ ತಿಳಿದುಕೊಳ್ಳಬೇಕು. ಎಲ್ಲಾ ಜಾತಿ, ಎಲ್ಲಾ ಧರ್ಮದ ಮಠಗಳನ್ನು ಪ್ರೋತ್ಸಾಹಿಸಬೇಕು. ವೀರಶೈವ ಲಿಂಗಾಯತ ಧರ್ಮದ ಅನೇಕ ಮಠಗಳು ಈ ಕೆಲಸ ಮಾಡಿಕೊಂಡು ಬರುತ್ತಿದೆ. ಬಸವಣ್ಣನವರ ಆದಿಯಾಗಿ ನೂರಾರು ಮಠಾಧೀಶರು ತೋರಿದ ಧರ್ಮದ ಹಾದಿಯಲ್ಲಿ ನಡೆಯೋಣ. ಧರ್ಮ ಯಾವುದರು ತತ್ವ ಒಂದೇ. ನಾಮ ನೂರಾದರು ದೈವ ಒಂದೇ. ಪೂಜೆ ಯಾವುದಾದರು ಭಕ್ತಿ ಒಂದೇ. ಕರ್ಮಯಾವುದಾದರೂ ನಿಷ್ಟೆ ಒಂದೇ. ದೇವನೊಬ್ಬ ನಾಮ ಹಲವು. ಗಣೇಶ, ಶಿವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತೇವೆ. ರಾಮ, ರಾವಣ, ಹನುಮಂತನ ಜಾತಿಯ ಬಗ್ಗೆ ವಿಮರ್ಶೆಗಳು ನಡೆಯುತ್ತಿವೆ’ ಎಂದರು.
ಭಕ್ತಿಯಿಂದಲೇ ಮುಕ್ತಿ. ಸೇವೆಯಿಂದಲೇ ಶಕ್ತಿ, ಸಹನೆ ಇಂದಲೇ ದೈವತ್ವ. ಕಾಯಕದಿಂದಲೇ ಸುಖ ಎಂಬುದನ್ನು ನಮ್ಮ ಬಸವಣ್ಣನವರು ಸಾರಿದರು. ಲಿಂಗಾಯತ ಧರ್ಮ ಕೂಡ ಇದನ್ನೇ ಹೇಳುತ್ತದೆ. ನನ್ನ ಭಕ್ತಿಯೇ ಜಾತಿ, ನನ್ನ ಕರ್ಮವೇ ಧರ್ಮ ಎಂದು ಸಾರಿದ ಏಕೈಕ ಧರ್ಮ ವಿರಶೈವ ಧರ್ಮ ಎಂದು ಕೊಂಡಾಡಿದರು.
ನನ್ನ ತಾಯಿ ಕೆಂಪೇಗೌಡರ ಧರ್ಮ ಪತ್ನಿ ಗೌರಮ್ಮ ಮಗುವಾದರೆ ಶಿವನ ಹೆಸರು ಇಡುತ್ತೇನೆ ಎಂದು ನಮ್ಮೂರ ಪಕ್ಕದ ಬೆಟ್ಟದಲ್ಲಿರುವ ಶಿವಾಲಯ ಮೂರ್ತಿಗೆ ಹರಸಿದ್ದರಂತೆ, ಹಾಗೆ ಶಿವಕುಮಾರ್ ಅಂತ ಇಟ್ಟರು. ನಮ್ಮ ಕುಟುಂಬದಲ್ಲಿ ಮಗು ಹುಟ್ಟಿದ ತಕ್ಷಣ ಕೆಂಪೇಗೌಡ ಅಂತ ಹೆಸರಿಡುವ ಪದ್ಧತಿ ಇದೆ. ನನ್ನ ಹೆಸರನ್ನು ಶಿವಕುಮಾರ ಅಂತ ಇಟ್ಟರು. ಕಾಕತಾಳೀಯ ಅಂದರೆ ಗಂಗಾಧರ ಅಜ್ಜ ಸ್ಥಾಪನೆ ಮಾಡಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದೆ. ಅವರ ಪಾದ ಸ್ಪರ್ಷ ಮಾಡಿದಾಗ 8ನೇ ಅದ್ಬುತ ಅನಿಸಿತು. ಹಾಗಾಗಿ, ಅವರಿಗೆ ಶರಣಾದೆ. ಅಂದಿನಿಂದ ಇಂದಿನವರೆಗೆ ನನ್ನ ಪ್ರತಿ ನಿಮಿಷ, ಗಳಿಗೆ, ಮಾತು ಅವರ ಆಶೀರ್ವಾದಿಂದ ಬರುತ್ತಿದೆ ಅಂತ ನಂಬಿದ್ದೇನೆ ಎಂದು ತಿಳಿಸಿದರು.


