ಒಮನ್ ಬಳಿ ಅಮೆರಿಕದ ಹೆಲಿಕಾಪ್ಟರ್ ಪತನಗೊಂಡ ನಂತರ ಇರಾನ್ ಮೇಲಿನ ವೈಮಾನಿಕ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ಅಮೆರಿಕ ಸೇನೆ ಹೇಳಿದೆ. ಹರ್ಮುಜ್ ಜಲಸಂಧಿ ಬಳಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ನಿಯಂತ್ರಣ ಕೇಂದ್ರಗಳು ಮತ್ತು ರಾಡಾರ್ ಕಣ್ಗಾವಲು ತಾಣಗಳನ್ನು ನಿಖರ ದಾಳಿಯೊಂದಿಗೆ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.
ಜಲಸಂಧಿ ಮೇಲೆ ಗಸ್ತು ತಿರುಗುತ್ತಿದ್ದ ಹೆಲಿಕಾಪ್ಟರ್ ಅನ್ನು ಇರಾನ್ ಹೊಡೆದುರುಳಿಸಿದೆ. ಅಮೆರಿಕ ಪ್ರತಿದಾಳಿ ನಡೆಸಿದೆ. ಯಾವುದೇ ದಾಳಿ ಅಥವಾ ಬೆದರಿಕೆಗೆ ಉತ್ತರಿಸದೆ ಬಿಡುವುದಿಲ್ಲ. ನೀವು ಸುರಕ್ಷಿತವಾಗಿರಲು ಬಯಸಿದರೆ ನಮ್ಮ ಪ್ರದೇಶವನ್ನು ಬಿಟ್ಟು ಹೋಗಿ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದರು.
ಇಸ್ರೇಲ್ ದಾಳಿಯಲ್ಲಿ ದೇಶದ ವಾಯು ರಕ್ಷಣಾ ಘಟಕಗಳ ಇಬ್ಬರು ಸದಸ್ಯರು ಬಲಿಯಾಗಿದ್ದಾರೆ ಎಂದು ಇರಾನ್‌ನ ಮಾಧ್ಯಮ ತಿಳಿಸಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗಿನಿಂದ ಯುದ್ಧವು ಜಾಗತಿಕ ಆರ್ಥಿಕತೆಯನ್ನು ಪ್ರಭಾವಿಸಿದೆ. ಎಲ್ಲೆಡೆ ಇಂಧನ ಬೆಲೆ ಹೆಚ್ಚಿ, ಆಹಾರ ಸೇರಿದಂತೆ ಅನೇಕ ಮೂಲಭೂತ ವಸ್ತುಗಳನ್ನು ಹೆಚ್ಚು ದುಬಾರಿಯಾಗಿವೆ. ಕದನ ವಿರಾಮವನ್ನು ಶಾಶ್ವತವಾಗಿ ಸಂಘರ್ಷ ಕೊನೆಗೊಳಿಸುವ ಒಪ್ಪಂದವಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇಸ್ರೇಲ್ ಇರಾನ್ ಬೆಂಬಲಿತ ಹೆಜ್ಬೊಲ್ಲಾ ವಿರುದ್ಧ ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದೆ.
ಅಮೆರಿಕ ಪ್ರತಿದಾಳಿ ನಡೆಸಿದ ಬಳಿಕ ಇರಾನ್ ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ಫ್ಲೀಟ್ ನೌಕಾಪಡೆಯ ಕೇಂದ್ರದ ಮೇಲೆ ಸರಣಿ ಡ್ರೋನ್ ದಾಳಿ ನಡೆಸಿದೆ. ಅಮೆರಿಕವು ಸೇನಾ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅರಬ್ಬಿ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೆರಿಕನ್ ಹಡಗುಗಳನ್ನು ಮುಳುಗಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಯುದ್ಧ ಸನ್ನಿವೇಶ ಸೃಷ್ಟಿಯಾಗಿದ್ದು, ಹರ್ಮುಜ್ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಭದ್ರತಾ ಆತಂಕ ಎದುರಾಗಿದೆ. ವಿಶ್ವಾದ್ಯಂತ ಕಚ್ಚಾ ತೈಲ ಬೆಲೆಗಳ ತೀವ್ರ ಏರಿಕೆ ಜೊತೆಗೆ ಜಾಗತಿಕ ಆರ್ಥಿಕತೆ ಮತ್ತಷ್ಟು ಅನಿಶ್ಚಿತತೆ ಎದುರಸಲಿದೆ. ಜಾಗತಿಕ ನಾಯಕರು ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣವೇ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.


