ದೀರ್ಘಕಾಲದ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ಇತ್ತೀಚೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಕೆಲವೇ ದಿನ ಕಳೆಯುವಷ್ಟರಲ್ಲಿ ಉಭಯ ದೇಶಗಳ ಮಧ್ಯೆ ಸಂಘರ್ಷ ಭುಗಿಲೆದ್ದಿದೆ. ಮಧ್ಯಪ್ರಾಚ್ಯದ ಹರ್ಮುಜ್ ಜಲಸಂಧಿಯಲ್ಲಿ ಪರಸ್ಪರ ಸೇನಾ ದಾಳಿಗಳು ಆರಂಭಗೊಂಡಿದ್ದು, ಜಾಗತಿಕ ಆತಂಕ ಸೃಷ್ಟಿಯಾಗಿದೆ. ಕೊಲ್ಲಿ ವಲಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ಒಮನ್ ಕರಾವಳಿ ಬಳಿ ಹರ್ಮುಜ್ ಜ;ಲಸಂಧಿ ಮೂಲಕ ಸಂಚರಿಸುತ್ತಿದ್ದ ಹಡಗಿನ ಮೇಲೆ ಇರಾನ್ ಜೂನ್ 25 ರಂದು ಪಡೆಗಳು ಹಠಾತ್ ದಾಳಿ ನಡೆಸಿವೆ. ಇರಾನ್‌ನ ಈ ಕ್ರಮವನ್ನು ಅನಗತ್ಯ ಆಕ್ರಮಣ ಮತ್ತು ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿದ ಅಮೆರಿಕ ತಕ್ಷಣದಿಂದ ಪ್ರತಿದಾಳಿ ನಡೆಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಹೇಳಿಕೆ ಪ್ರಕಾರ, ಹಡಗಿನ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕದ ವಾಯುಸೇನೆ ಮತ್ತು ನೌಕಾಸೇನೆ ಇರಾನ್‌ನ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಬೃಹತ್ ದಾಳಿ ನಡೆಸಿವೆ. ಇರಾನ್ ಕರಾವಳಿಯಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳು, ಡ್ರೋನ್ ತಾಣಗಳು ಮತ್ತು ಕರಾವಳಿ ರಾಡಾರ್ ಕೇಂದ್ರಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಒಪ್ಪಂದದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಯುಎಸ್ ಮಿಲಿಟರಿ ಸದಾ ಎಚ್ಚರವಾಗಿರುತ್ತದೆ.
ಅಮೆರಿಕ ತನ್ನ ನೆಲದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಕೆರಳಿದ ಇರಾನ್, ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಈ ವಿಷಯ ತಿಳಿಸಿದ್ದು, ಅಮೆರಿಕದ ಆಕ್ರಮಣಶೀಲತೆ ಹೀಗೇ ಮುಂದುವರಿದರೆ ನಮ್ಮ ಮುಂದಿನ ಪ್ರತಿಕ್ರಿಯೆ ಇದಕ್ಕಿಂತಲೂ ಭೀಕರವಾಗಿರಲಿದೆ ಎಂದು ಎಚ್ಚರಿಕೆ ನೀಡಿದೆ.
ಶಾಂತಿ ಒಪ್ಪಂದ ಉಲ್ಲಂಘನೆಯು ಮೂರ್ಖತನ ಎಂದು ಡೊನಾಲ್ಡ್ ಟ್ರಂಪ್ ಕಿಡಿ ಕಾರಿದ್ದು, ಜಾಗತಿಕ ಕಚ್ಚಾ ತೈಲದ 20% ಹಾದುಹೋಗುವ ಹರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್‌ಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ, ಹರ್ಮುಜ್ ಜಲಸಂಧಿ ನಮ್ಮ ನಿಯಂತ್ರಣದಲ್ಲೇ ಇರಲಿದೆ. ಇದು ಕದನ ವಿರಾಮದ ಉಲ್ಲಂಘನೆಯಲ್ಲ, ಕದನ ವಿರಾಮವನ್ನು ನಮ್ಮ ಶರತ್ತುಗಳ ಮೇಲೆ ಕಾಪಾಡಿಕೊಳ್ಳುವ ಪ್ರಯತ್ನ ಎಂದು ಸಮರ್ಥಿಸಿಕೊಂಡಿದ್ದಾರೆ.


