ಗದಗ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ವಾರದ ಬಡ್ಡಿ ಹಣ ನೀಡದಿದ್ದಕ್ಕೆ ಇಬ್ಬರು ಮಹಿಳೆಯರನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಮೀಟರ್ ಬಡ್ಡಿ ದಂಧಕೋರರು ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕೇಳಿಬಂದಿದೆ. ದಂಧೆಕೋರರಿಂದ ತಪ್ಪಿಸಿಕೊಂಡು ಬಂದಿರುವ ಮಹಿಳೆಯರು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.
ಶಿರೋಳ ಗ್ರಾಮದ ನಿವಾಸಿಗಳಾದ ಬಸವಣ್ಣೆಮ್ಮ ಅಂಗಡಿ ಮತ್ತು ಮಹಾದೇವಿ ಮಠದ ಹಲ್ಲೆಗೊಳಗಾದ ಮಹಿಳೆಯರು. ಗ್ರಾಮದ ಅಕ್ರಮ ಬಡ್ಡಿ ದಂಧೆಕೋರರಾದ ಸಿದ್ದಯ್ಯ ಹೊಸಮನಿ ಹಾಗೂ ಮಗ ವಿನೋದ್ ಹೊಸಮನಿ ಎಂಬವರಿಂದ ಸಾಲ ಪಡೆದುಕೊಂಡಿದ್ದರು. ಆರೋಪಿ ಸಿದ್ದಯ್ಯ ಹೊಸಮನಿಯು ಸಂತ್ರಸ್ತೆ ಮಹಾದೇವಿ ಮಠದ ಅವರಿಗೆ 1.50 ಲಕ್ಷ ರೂಪಾಯಿ ಸಾಲ ನೀಡಿ ವಾರಕ್ಕೆ 4,500 ರೂಪಾಯಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಮತ್ತೊಬ್ಬ ಮಹಿಳೆ ಬಸವಣ್ಣೆಮ್ಮ ಅವರಿಗೆ 3 ಲಕ್ಷ ರೂಪಾಯಿ ಸಾಲ ನೀಡಿ ಪ್ರತಿ ವಾರಕ್ಕೆ 9,000 ರೂಪಾಯಿಗಳ ಬಡ್ಡಿ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಮೂರು ವರ್ಷಗಳಿಂದ ಈ ಮಹಿಳೆಯರು ನಿಯಮಿತವಾಗಿ ಬಡ್ಡಿ ಹಣ ಪಾವತಿಸುತ್ತಿದ್ದರು.
ಕಳೆದ ಮೂರು ತಿಂಗಳಿಂದ ಆರ್ಥಿಕ ಸಂಕಷ್ಟದಿಂದಾಗಿ ಮಹಿಳೆಯರಿಗೆ ವಾರದ ಬಡ್ಡಿ ಹಣ ಸರಿಯಾಗಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಿದ್ದಯ್ಯ ಹೊಸಮನಿ ಮತ್ತು ಆತನ ಮಗ ವಿನೋದ್, ಮಹಿಳೆಯರನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಹೋಗಿ ಹೊರಗಿನಿಂದ ಲಾಕ್ ಮಾಡಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಪ್ಪಿಸಿಕೊಂಡ ಮಹಿಳೆಯರು ನ್ಯಾಯಕ್ಕಾಗಿ ನರಗುಂದ ಪೊಲೀಸ್ ಠಾಣೆಗೆ ಧಾವಿಸಿದ್ದರು. ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿ ಉದ್ಧಟತನ ತೋರಿದ್ದಾರೆ ಎನ್ನಲಾಗಿದೆ. ಬಳಿಕ ಸಂತ್ರಸ್ತರೆಯರು ಗದಗ ಎಸ್ಪಿ ಕಚೇರಿಗೆ ಬಂದು, ನಮಗೆ ಬಡ್ಡಿಕೋರರಿಂದ ರಕ್ಷಣೆ ನೀಡಿ, ನ್ಯಾಯ ಕೊಡಿಸಿ ಎಂದು ಅಧಿಕಾರಿಗಳ ಮುಂದೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಗದಗ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿಕೊಂಡು ಅಕ್ರಮ ಬಡ್ಡಿ ದಂಧೆಕೋರ ಮನೋಹರ್ ಕಟ್ಟಿಮನಿ ಎಂಬಾತನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆ ವೇಳೆ 150ಕ್ಕೂ ಹೆಚ್ಚು ಚೆಕ್‌ಗಳು, 65ಕ್ಕೂ ಹೆಚ್ಚು ಖಾಲಿ ಬಾಂಡ್ ಪೇಪರ್‌ಗಳು, 422 ಗ್ರಾಂ ಚಿನ್ನ ಮತ್ತು ಲಕ್ಷಾಂತರ ನಗದು ವಶಕ್ಕೆ ಪಡೆದುಕೊಂಡಿದ್ದರು.


