ಇಂದು (ಮಂಗಳವಾರ) ಇರಾನ್ ಮೇಲೆ ನಡೆಸಬೇಕಿದ್ದ ದಾಳಿಯನ್ನು ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಾಯಕರ ಮನವಿಯಂತೆ ತಾತ್ಕಾಲಿಕವಾಗಿ ಮುಂಝದೂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಒಪ್ಪಂದಕ್ಕೆ ಬರದಿದ್ದರೆ ಯುದ್ಧ ಮತ್ತೆ ಆರಂಭವಾಗಬಹುದು ಎಂದು ಟ್ರಂಪ್ ಈ ಮೊದಲು ಎಚ್ಚರಿಕೆ ನೀಡಿದ್ದರು. ಅಸ್ಥಿರ ಯುದ್ಧ ವಿರಾಮದ ಬಳಿಕ ಇರಾನ್‌ಗೆ ಒಪ್ಪಂದಕ್ಕೆ ಬರಲು ಸಮಯ ಕಡಿಮೆಯಾಗುತ್ತಿದೆ. ಬೇಗ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅವರಲ್ಲಿ ಏನೂ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದರು.
ಸ್ವೀಕಾರಾರ್ಹ ಒಪ್ಪಂದ ಸಾಧ್ಯವಾಗದಿದ್ದರೆ ಕ್ಷಣಾರ್ಧದಲ್ಲೇ ಇರಾನ್ ಮೇಲೆ ದೊಡ ಮಟ್ಟದ ದಾಳಿ ನಡೆಸಲು ಸಿದ್ಧರಾಗಿರಿ ಎಂದು ಅಮೆರಿಕ ಸೇನೆಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ. ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಇರಾನ್ ಯುದ್ಧದ ಕುರಿತು ಮಾತುಕತೆ ನಡೆಸಿದ್ದಾರೆ.
ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಹಲವು ಪ್ರದೇಶಗಳ ಮೇಲೆ ದಾಳಿ ಆರಂಭಿಸಿದ ಬಳಿಕ ಸಂಘರ್ಷ ತೀವ್ರಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಹೆಚ್ಚಿದ್ದು, ಜಾಗತಿಕ ಇಂಧನ ಬೆಲೆಗಳ ಏರಿಕೆಗೆ ಕಾರಣವಾಗಿದೆ.
ಶಾಶ್ವತ ಶಾಂತಿ ಒಪ್ಪಂದಕ್ಕೆ ಅಮೆರಿಕ ನಡೆಸುತ್ತಿರುವ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಸಂಘರ್ಷದ ಪರಿಣಾಮ ತಂತ್ರಜ್ಞಾನಾತ್ಮಕವಾಗಿ ಹರ್ಮುಜ್ ಜಲಸಂಧಿ ಕೂಡ ಜಾಗತಿಕ ಮಟ್ಟದ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.
ಸಂಘರ್ಷದ ಪರಿಣಾಮ ಇಸ್ರೇಲ್ ಮತ್ತು ಲೆಬನಾನ್‌ಗಳಲ್ಲೂ ಗಡಿ ಸಮರ ಹೆಚ್ಚಾಗಿವೆ. ಇರಾನ್ ಬೆಂಬಲಿತ ಸಂಘಟನೆ ಹಿಜ್ಬುಲ್ಲಾ, ಲೆಬನಾನ್‌ನಲ್ಲಿ ಶಾಶ್ವತ ಯುದ್ಧ ವಿರಾಮ ಜಾರಿಯಾಗುವವರೆಗೆ ಟ್ರಂಪ್ ಜೊತೆ ಶಾಂತಿ ಒಪ್ಪಂದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಇರಾನ್ ಹೇಳಿದೆ. ಇರಾನ್ ಅತ್ಯಧಿಕವಾಗಿ ಸಂಸ್ಕರಿಸಿರುವ ಯುರೇನಿಯಂ ಸಂಗ್ರಹವನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು ಎಂಬ ಬೇಡಿಕೆಯೂ ಟ್ರಂಪ್ ಮಂಡಿಸುವ ಶಾಂತಿ ಪ್ರಸ್ತಾವನೆಯಲ್ಲಿದೆ.


