ಮಾಧ್ಯಮರಂಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶಗಳು ದೊರೆಯಬೇಕು. ಕಟ್ಟಕಡೆಯ ಮನುಷ್ಯ, ಬಡವರು ಹಾಗೂ ಸಾಮಾನ್ಯ ಜನರ ಧ್ವನಿಯಾಗಿ ಅವರ ಕಷ್ಟ-ಸುಖಗಳನ್ನು ಮಾಧ್ಯಮಗಳು ಸಮಾಜದ ಮುಂದಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಸಮುದಾಯಗಳಿಗೆ ಬುದ್ಧಿ, ಪ್ರಾವೀಣ್ಯತೆ ಅಥವಾ ವ್ಯಕ್ತಿತ್ವದ ಕೊರತೆಯಿಲ್ಲ. ಐತಿಹಾಸಿಕವಾಗಿ ಅಕ್ಷರ ಸಂಸ್ಕೃತಿ ಮತ್ತು ಶಿಕ್ಷಣದ ಅವಕಾಶಗಳಿಂದ ವಂಚಿತರಾಗಿದ್ದ ಕಾರಣದಿಂದಾಗಿ ಪತ್ರಿಕಾರಂಗದಲ್ಲಿ ಅವರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಬಾಬಾಸಾಹೇಬ್ ಅಂಬೇಡ್ಕರ್, ಬಿ.ರಾಚಯ್ಯ, ಬಸವಲಿಂಗಪ್ಪ ಹಾಗೂ ಕೃಷ್ಣಪ್ಪ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಿರುವುದು ಸಂತೋಷದ ವಿಚಾರ. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಅಂಬೇಡ್ಕರ್ ಸಂವಿಧಾನದ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಿದ್ದಾರೆ. ಪತ್ರಿಕಾರಂಗದಲ್ಲಿ ಮೀಸಲಾತಿ ಇಲ್ಲ. ಹೀಗಾಗಿ ಎಸ್ಸಿ, ಎಸ್ಟಿ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಪತ್ರಿಕಾರಂಗದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸಮಾನ ಅವಕಾಶಗಳು ದೊರೆತಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ರೂಪುಗೊಳ್ಳುತ್ತಿದ್ದರು ಎಂದರು.
ನಾನು ಪತ್ರಿಕಾರಂಗಕ್ಕೆ ಹೋಗಬೇಕಾಗಿತ್ತು ಎಂಬ ಭಾವನೆ ಈಗ ಮೂಡುತ್ತಿದೆ. ಆದರೆ ಕಾಲ ಮಿಂಚಿಹೋಗಿದೆ. ಇಲ್ಲಿರುವ ಅನೇಕ ಸಂಪಾದಕರು ಹಾಗೂ ಪತ್ರಕರ್ತರು ಯಾರಿಗೂ ಕಡಿಮೆಯಿಲ್ಲ. ಅವರಲ್ಲಿ ಯೋಗ್ಯತೆ ಮತ್ತು ಪ್ರಾಮಾಣಿಕತೆ ಇದೆ. ಸತ್ಯವಾದ ಸುದ್ದಿಗಳನ್ನು ಜನರ ಮುಂದಿಡುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು ಎಂದು ಹೇಳಿದರು.
ಸತ್ಯ ಜನರಿಗೆ ತಿಳಿಯದೇ ಹೋದರೆ ಅಸತ್ಯವನ್ನೇ ಸತ್ಯವೆಂದು ನಂಬುವ ಸಾಧ್ಯತೆ ಇದೆ. ಸತ್ಯಕ್ಕೆ ಹತ್ತಿರವಾಗದ ಮಾಹಿತಿಯನ್ನು ಜನರಿಗೆ ನೀಡಿದರೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮಾಧ್ಯಮದಲ್ಲಿ ಬದಲಾವಣೆ ಆಗಬೇಕು ಹಾಗೂ ಮಾಧ್ಯಮದ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು. ಸಂವಿಧಾನದ ಆಶಯ ಜಾರಿಗೊಳಿಸುವವರು ಸಂವಿಧಾನದಲ್ಲಿ ನಂಬಿಕೆ ಹೊಂದಿರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಸಂವಿಧಾನದಲ್ಲಿ ನಂಬಿಕೆ ಇಲ್ಲದಿದ್ದರೆ ಆಶಯಗಳು ಈಡೇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ತಿಳಿದುಕೊಳ್ಳಬೇಕು. ಸಂವಿಧಾನವೇ ತಿಳಿಯದಿದ್ದರೆ ಆಶಯಗಳನ್ನು ಹೇಗೆ ಈಡೇರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಬಡವರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಬಲರಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಲು ಇದರಿಂದಲೇ ಸಾಧ್ಯವಾಗುತ್ತದೆ. ವೈದ್ಯರು, ಎಂಜಿನಿಯರ್ಗಳು, ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರಲ್ಲಿಯೂ ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸುವವರಿಗಿಂತ ಕರ್ಮ ಸಿದ್ಧಾಂತವನ್ನು ನಂಬುವವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಏಕೆ ಎಂಬುದನ್ನು ಪ್ರಶ್ನಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾವಂತರೇ ಜಾತಿ ಹಾಗೂ ಅಸ್ಪೃಶ್ಯತೆಯ ಆಚರಣೆಗಳನ್ನು ಮುಂದುವರಿಸುವುದನ್ನು ಕಾಣುತ್ತೇವೆ. ಹಾಗಾದರೆ ಅವರು ಕಲಿತ ಶಿಕ್ಷಣ ಎಲ್ಲಿಗೆ ಹೋಯಿತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರು ಭಾರತದ ಜಾತಿ ವ್ಯವಸ್ಥೆಗೆ ಚಲನೆಯೇ ಇಲ್ಲ ಎಂದು ಹೇಳಿದ್ದರು. ಚಲನಾರಹಿತ ಜಾತಿ ವ್ಯವಸ್ಥೆಯಿಂದಾಗಿ ಬದಲಾವಣೆ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಪತ್ರಿಕಾ ಮಾಧ್ಯಮವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಬೇಕು. ಸಮಾಜದಲ್ಲಿ ಅನ್ಯಾಯ ಮತ್ತು ಅಸಮಾನತೆ ಏಕೆ ಇದೆ ಎಂಬುದನ್ನು ಪ್ರಶ್ನಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
1949ರ ನವೆಂಬರ್ 25ರಂದು ಸಂವಿಧಾನ ಅಂಗೀಕಾರಕ್ಕೂ ಮುನ್ನ ಸಂವಿಧಾನ ಸಭೆಯಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ಅಂಬೇಡ್ಕರ್ ಅವರು ಅಸಮಾನತೆ ಮುಂದುವರಿದರೆ, ಅದರ ನೋವನ್ನು ಅನುಭವಿಸುವ ಜನರು ಪ್ರಜಾಪ್ರಭುತ್ವದ ವ್ಯವಸ್ಥೆಯ ವಿರುದ್ಧ ತಿರುಗಿಬೀಳುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದರು ಎಂದು ಹೇಳಿದರು.
ಸಂವಿಧಾನವನ್ನು ವಿರೋಧಿಸಿದವರು ಹಾಗೂ ಅಸ್ಪೃಶ್ಯತೆಯನ್ನು ಪ್ರತಿಪಾದಿಸಿದವರೊಂದಿಗೆ ಸ್ವಾರ್ಥಕ್ಕಾಗಿ ಕೈಜೋಡಿಸುವುದು ಸರಿಯಲ್ಲ. ಮನುಸ್ಮೃತಿ ಹಾಗೂ ಮನುವಾದದ ಪರವಾಗಿರುವವರೊಂದಿಗೆ ಸೇರಿಕೊಂಡು ಸಾಮಾಜಿಕ ಬದಲಾವಣೆ ತರಲು ಸಾಧ್ಯವಿಲ್ಲ. ಒಬ್ಬರಿಗೆ ಸ್ಥಾನಮಾನ ಸಿಗಬಹುದು, ಶಾಸಕರಾಗಬಹುದು, ರಾಜ್ಯಸಭಾ ಸದಸ್ಯರಾಗಬಹುದು ಅಥವಾ ಲೋಕಸಭಾ ಸದಸ್ಯರಾಗಬಹುದು. ಆದರೆ ಇದರಿಂದ ಸಮಾಜದಲ್ಲಿ ಮೂಲಭೂತ ಬದಲಾವಣೆ ತರಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಇಷ್ಟು ವರ್ಷಗಳಾದರೂ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂದರು.
ಯಾರನ್ನೂ ದ್ವೇಷಿಸುವ ಅಗತ್ಯವಿಲ್ಲ. ಆದರೆ ಸಾಮಾಜಿಕ ಬದಲಾವಣೆಯ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಇಲ್ಲದಿದ್ದರೆ ತಾವು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಲು ಸಾಧ್ಯವಾಗಿರುವುದಕ್ಕೂ ಸಂವಿಧಾನವೇ ಕಾರಣ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿರುವುದು ಸಂವಿಧಾನ ಎಂದು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗಾಗಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯನ್ನು ಕೇಂದ್ರ ಸರ್ಕಾರದಲ್ಲೂ ಜಾರಿಗೆ ತರಬೇಕಾಗಿದೆ. ಜನರು ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಕೇಂದ್ರದಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆ ಏಕೆ ಜಾರಿಯಾಗಿಲ್ಲ ಎಂಬುದನ್ನು ಪ್ರಶ್ನಿಸಬೇಕು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾತ್ರ ಇಂತಹ ಕಾಯ್ದೆ ಜಾರಿಯಲ್ಲಿದೆ ಎಂದರು.
ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದರು. ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆ ರೂಪಿಸುವಂತೆ ಅವರಿಗೆ ಸೂಚಿಸಿ, ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯನ್ನು ಅಂಗೀಕರಿಸಲಾಯಿತು. ಪ್ರಸ್ತುತ ಕರ್ನಾಟಕದಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಅಡಿಯಲ್ಲಿ ಸುಮಾರು 44 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತಿದೆ. ರಾಜ್ಯದ ಬಜೆಟ್ನಲ್ಲಿ ಶೇ.24.1ರಷ್ಟು ಅನುದಾನ ಇರಬೇಕೆಂಬ ನಿಯಮದಂತೆ ಈ ಅನುದಾನ ಮೀಸಲಿಡಲಾಗುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಂಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಸಂದರ್ಭದಲ್ಲಿ ರತ್ನಪ್ರಭಾ ಸಮಿತಿಯ ವರದಿ ತರಿಸಿ, ದೇಶದಲ್ಲೇ ಮೊದಲ ಬಾರಿಗೆ ಕಾನೂನು ರೂಪಿಸುವ ಮೂಲಕ ಮುಂಬಡ್ತಿ ಮೀಸಲಾತಿಯನ್ನು ರಕ್ಷಿಸಿದ ರಾಜ್ಯ ಕರ್ನಾಟಕವಾಗಿದೆ. ಯಾವುದೇ ಹಕ್ಕುಗಳು ಸ್ವಯಂಚಾಲಿತವಾಗಿ ದೊರೆಯುವುದಿಲ್ಲ. ಹಕ್ಕುಗಳಿಗಾಗಿ ಒತ್ತಡ ಹೇರಿ, ಹೋರಾಟ ನಡೆಸಬೇಕು. ಸಾಮಾಜಿಕ ಬದಲಾವಣೆಗೆ ಸಂಘಟಿತರಾಗಿ ಪ್ರಯತ್ನಿಸುವುದು ಅಗತ್ಯ ಎಂದು ಸಿದ್ದರಾಮಯ್ಯ ಕರೆ ನೀಡಿದರು.


