Wednesday, October 21, 2026
Menu

ಭೀಕರ ರಸ್ತೆ ದುರಂತದಲ್ಲಿ ಮಗು ಸೇರಿ ಒಂದೇ ಕುಟುಂಬದ ಮೂವರು ದಾರುಣ ಸಾವು!

ಉದಯಕಾಲ ನ್ಯೂಸ್, ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತವೊಂದು ಇಡೀ ಗ್ರಾಮದಲ್ಲಿ ಶೋಕಸಾಗರವನ್ನು ಉಂಟುಮಾಡಿದೆ. ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನೇರವಾಗಿ ಕೆರೆಗೆ ಉರುಳಿಬಿದ್ದ ಪರಿಣಾಮ, ನಾಲ್ಕು ವರ್ಷದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತರನ್ನು ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿಗಳಾದ ವಿಜೇಶ್ (36), ಅವರ ಪತ್ನಿ ಪಮಿತ (34) ಹಾಗೂ ಮುದ್ದಿನ ಕಂದಮ್ಮ ನಾಲ್ಕು ವರ್ಷದ ಮಗಳು ಲಿಯಾ ಎಂದು ಗುರುತಿಸಲಾಗಿದೆ.

ರಾತ್ರಿ ನಡೆದ ದುರಂತ, ಬೆಳಗ್ಗೆ ಬೆಳಕಿಗೆ ಬಂದ ಸತ್ಯ
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಜೇಶ್ ದಂಪತಿ ಹಾಗೂ ಮಗಳು ಸೋಮವಾರ ರಾತ್ರಿ ಸಿದ್ದಾಪುರದಿಂದ ಬಾಣಂಗಾಲ ಗ್ರಾಮದಲ್ಲಿರುವ ತಮ್ಮ ಮನೆಗೆ ಸ್ಯಾಂಟ್ರೋ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಕ್ಕದ ಕೆರೆಗೆ ಉರುಳಿ ಬಿದ್ದಿದೆ. ಕತ್ತಲು ಹಾಗೂ ನಿರ್ಜನ ಪ್ರದೇಶವಾಗಿದ್ದರಿಂದ ರಾತ್ರಿ ವೇಳೆ ಈ ದುರ್ಘಟನೆ ಯಾರಿಗೂ ಗಮನಕ್ಕೆ ಬಂದಿರಲಿಲ್ಲ.

ಮರುದಿನ ಮಂಗಳವಾರ ಬೆಳಿಗ್ಗೆ ಅದೇ ಮಾರ್ಗವಾಗಿ ಕೆಲಸಕ್ಕೆ ತೆರಳುತ್ತಿದ್ದ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರು ಬಿದ್ದಿರುವುದನ್ನು ಕಣ್ಣಾರೆ ಕಂಡು ಬೆಚ್ಚಿಬಿದ್ದರು. ತಕ್ಷಣ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಸಿದ್ದಾಪುರ ಪೊಲೀಸರ ಭೇಟಿ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿದ್ದಾಪುರ ಠಾಣೆಯ ಪೊಲೀಸರು, ಸಾರ್ವಜನಿಕರ ಹಾಗೂ ಮುಳುಗು ತಜ್ಞರ ಸಹಾಯದಿಂದ ಕಾರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದರು. ಆದರೆ ಅಷ್ಟರೊಳಗೆ ಕಾರಿನೊಳಗೆ ಸಿಲುಕಿದ್ದ ಮೂವರೂ ಉಸಿರುಗಟ್ಟಿ ಮೃತಪಟ್ಟಿರುವುದು ಖಚಿತವಾಯಿತು. ಶೋಧ ಕಾರ್ಯದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು.

ಅಪಘಾತಕ್ಕೆ ಕತ್ತಲು, ರಸ್ತೆಯ ತಿರುವು ಅಥವಾ ವಾಹನ ನಿಯಂತ್ರಣ ತಪ್ಪಿರುವುದೇ ಕಾರಣವಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ಮೂವರು ಅಸುನೀಗಿರುವುದು ಬಾಡಗ ಬಾಣಂಗಾಲ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರನ್ನು ತೀವ್ರ ಆಘಾತಕ್ಕೆ ಗುರಿಪಡಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

#KodaguNews #SiddapuraAccident #CarIntoPond #TragicDeath #UdayakalaNews #KarnatakaPolice
#MadikeriUpdates

Related Posts

Leave a Reply

Your email address will not be published. Required fields are marked *