Menu

ಮೂತ್ರಕ್ಕೆ ಹೋಗಲು ಅನುಮತಿ ನೀಡದೆ ಐದು ವರ್ಷದ ಮಗುವಿನ ಅಂಗ ಸುಟ್ಟ ಶಿಕ್ಷಕಿ

ಉತ್ತರ ಪ್ರದೇಶದ ವಾರಣಾಸಿಯ ಶಾಲೆಯೊಂದರಲ್ಲಿ ಮಗು ಬಟ್ಟೆಯಲ್ಲೇ ಮೂತ್ರ ಮಾಡಿಕೊಂಡಿದ್ದಕ್ಕೆ ಶಿಕ್ಷಕಿಯು ಮಗುವಿನ ಖಾಸಗಿ ಅಂಗವನ್ನು ಸುಟ್ಟು ಕ್ರೌರ್ಯ ತೋರಿದ ಆಘಾತಕಾರಿ ಘಟನೆ ಬಹಿರಂಗಗೊಂಡಿದೆ.

ಪ್ಲೇ ಸ್ಕೂಲ್‌ನಲ್ಲಿ ಆಕಸ್ಮಿಕವಾಗಿ ಪ್ಯಾಂಟ್‌ನಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ ಸಿಟ್ಟಿಗೆದ್ದ ಕ್ರೈರಿ ಶಿಕ್ಷಕಿ, ಬಿಸಿ ಚಾಕುವಿನಿಂದ ಮಗುವಿನ ಖಾಸಗಿ ಅಂಗವನ್ನು ಸುಟ್ಟು ವಿಕೃತಿ ಮೆರೆದಿದ್ದಾಳೆ. ವಾರಣಾಸಿಯ ಸೆರೀನ್ ಸೋನಿ ಪ್ಲೇ ಸ್ಕೂಲಿ ನಲ್ಲಿ ವಕೀಲರೊಬ್ಬರ ಐದು ವರ್ಷದ ಮಗು ತರಗತಿಯ ಶಿಕ್ಷಕಿಯ ಬಳಿ ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದಾಗ. ಶಿಕ್ಷಕಿ ಅನುಮತಿ ನೀಡಿಲ್ಲ. ಹೀಗಾಗಿ ಮಗು ನಿಯಂತ್ರಿಸಲಾಗದೆ ಪ್ಯಾಂಟ್‌ ಮೇಲೆಯೇ ಮೂತ್ರ ಮಾಡಿಕೊಂಡಿದೆ.

ಮಗು ಮೂತ್ರ ಮಾಡಿಕೊಂಡಿದ್ದಕ್ಕೆ ಆಕ್ರೋಶಗೊಂಡ ಆ ಶಿಕ್ಷಕಿ, ಮಾನವೀಯತೆ ಮರೆತು ಬಾಲಕನನ್ನು ಬಲವಂತವಾಗಿ ಬೇರೆ ಕೊಠಡಿಗೆ ಎಳೆದುಕೊಂಡು ಹೋಗಿ ಗ್ಯಾಸ್ ಸ್ಟೌವ್ ಹಚ್ಚಿ ಚಾಕುವನ್ನು ಕೆಂಪಗೆ ಕಾಯಿಸಿ ಬಾಲಕನ ಖಾಸಗಿ ಅಂಗದ ಮೇಲೆ ಇಟ್ಟು ಸುಟ್ಟು ಕ್ರೌರ್ಯ ಮೆರೆದಿದ್ದಾರೆ. ಈ ದೌರ್ಜನ್ಯದ ಬಗ್ಗೆ ಮನೆಯಲ್ಲಿ ಯಾರಿಗಾದರೂ ಬಾಯ್ಬಿಟ್ಟರೆ ಅಥವಾ ತಪ್ಪು ಪುನರಾವರ್ತಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಿಂದ ಭಯಭೀತಗೊಂಡ ಮಗು ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದೆ. ಪೋಷಕರು ಶಿಕ್ಷಕಿಯನ್ನು ಸಂಪರ್ಕಿಸಲು ಯತ್ನಿಸಿದರೂ ಆಕೆ ಕರೆಗಳನ್ನು ಸ್ವೀಕರಿಸಿಲ್ಲ. ಶಾಲೆಯ ಪ್ರಾಂಶುಪಾಲೆಯನ್ನು ಸಂಪರ್ಕಿಸಿದಾಗ, ತಪ್ಪಿತಸ್ಥ ಶಿಕ್ಷಕಿಯ ಪರ ನಿಂತು ಪೋಷಕರನ್ನೇ ಬೆದರಿಸಿದ್ದಾರೆ. ಮರುದಿನ ಶಾಲೆಗೆ ತೆರಳಿದ ತಂದೆಗೂ ಆಡಳಿತ ಮಂಡಳಿದೇ ಸ್ಪಂದನೆ ನೀಡದೆ ಉದ್ಧಟತನ ತೋರಿದೆ.

ಮಗುವಿನ ದೈಹಿಕ ಗಾಯ ಹಾಗೂ ತೀವ್ರ ಮಾನಸಿಕ ಆಘಾತವನ್ನು ಪರಿಗಣಿಸಿದ ತಂದೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಚಿತಪಡಿಸಿರುವ ಹಿರಿಯ ಪೊಲೀಸ್
ಅಧಿಕಾರಿ ಅತುಲ್ ಸಿಂಗ್, ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಕೃತ್ಯವೆವೆಗಿರುವ ಶಿಕ್ಷಕಿ ಹಾಗೂ ಶಾಲಾ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *