Menu

ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಮಸೂದೆ 2026 ಲೋಕಸಭೆಯಲ್ಲಿ ಮಂಡನೆ

ನೀಟ್‌ ಪರೀಕ್ಷಾ ಅಕ್ರಮಗಳ ಹಿನ್ನೆಲೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಮಸೂದೆ 2026 ಸೋಮವಾರ ಮಂಡಿಸಿದ್ದಾರೆ.

ಕಠಿಣ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಳ, ಹಳೆಯ ಕಾಯ್ದೆಗೆ ಹೋಲಿಸಿದರೆ ಅಪರಾಧಿಗಳಿಗೆ ವಿಧಿಸುವ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಗಣನೀಯವಾಗಿ ಈ ಮಸೂದೆಯಲ್ಲಿ ಹೆಚ್ಚಿಸಲಾಗಿದೆ. ಇದರ ಮುಖ್ಯ ಉದ್ದೇಶಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ, ಹಾಲಿ ಇರುವ 2024ರ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸುವುದಾಗಿದೆ.

ಸಾಮಾನ್ಯ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಈ ಹಿಂದೆ ಇದ್ದ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಐದರಿಂದ 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಏರಿಸಲಾಗಿದೆ. ಹಾಗೆಯೇ 10 ಲಕ್ಷ ರೂ. ಇದ್ದ ದಂಡವನ್ನು 50 ಲಕ್ಷ ರೂ.ವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ಪರೀಕ್ಷಾ ಮಾಫಿಯಾ ಮತ್ತು ಸಂಘಟಿತ ಜಾಲಗಳಿಗೆ ಕನಿಷ್ಠ ಶಿಕ್ಷೆಯನ್ನು ಏಳು ವರ್ಷಗಳಿಗೆ ಹೆಚ್ಚಿಸಲಾಗಿದ್ದು, ಗರಿಷ್ಠ 10 ಕೋಟಿ ರೂ.ವರೆಗೆ ದಂಡ ಹಾಗೂ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ.

ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತ ಸಂಸ್ಥೆಗಳು ಅಥವಾ ಕಂಪನಿಗಳು ಅಕ್ರಮ ಎಸಗಿದರೆ ಗರಿಷ್ಠ ದಂಡವನ್ನು ಒಂದು ಕೋಟಿಯಿಂದ ಐದು ಕೋಟಿಗೆ ಹೆಚ್ಚಿಸಲಾಗಿದೆ. ಪರೀಕ್ಷೆ ನಡೆಸದಂತೆ ನಿಷೇಧಿಸುವ ಅವಧಿಯನ್ನು ನಾಲ್ಕರಿಂದ ಎಂಟು ವರ್ಷಗಳಿಗೆ ದ್ವಿಗುಣಗೊಳಿಸಲಾಗಿದೆ.

ಪರೀಕ್ಷಾ ಅಕ್ರಮ ಅಥವಾ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸ್, ಕೇಂದ್ರೀಯ ಸಂಸ್ಥೆಗಳು ಅಥವಾ ವಿಶೇಷ ಪಡೆಗಳು ಕಡ್ಡಾಯವಾಗಿ 60 ದಿನಗಳೊಳಗೆ ಪೂರ್ಣಗೊಳಿಸಬೇಕು.
ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.ತ ನಿಖಾ ಸಂಸ್ಥೆಯು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ ಮೂರು ತಿಂಗಳೊಳಗೆ ನ್ಯಾಯಾಲಯಗಳು ವಿಚಾರಣೆ ನಡೆಸಿ ತೀರ್ಪು ನೀಡಬೇಕಾಗುತ್ತದೆ.

ಸಂಘಟಿತ ಪರೀಕ್ಷಾ ಅಕ್ರಮಗಳನ್ನು ಪತ್ತೆಹಚ್ಚಲು ಮತ್ತು ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ನೇರವಾಗಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ವಿಶೇಷ ಕಾರ್ಯಪಡೆ ರಚಿಸುವ ಪ್ರತ್ಯೇಕ ಅಧಿಕಾರವನ್ನು ಈ ಮಸೂದೆ ನೀಡುತ್ತದೆ. ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ತೀರ್ಪು ಅಥವಾ ಜಾಮೀನು ಆದೇಶಗಳ ವಿರುದ್ಧ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು 30 ದಿನ ಕಾಲಾವಕಾಶ ಇರಲಿದ್ದು, ಹೈಕೋರ್ಟ್‌ಗಳು ಕೂಡ ಮೂರು ತಿಂಗಳ ಒಳಗಾಗಿ ಈ ಮೇಲ್ಮನವಿಗಳನ್ನು ಇತ್ಯರ್ಥಪಡಿಸಬೇಕು.

Related Posts

Leave a Reply

Your email address will not be published. Required fields are marked *