ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ ಐದೇ ನಿಮಿಷಗಳಲ್ಲಿ ಫಲಿತಾಂಶ ಘೋಷಣೆ ಆಗುವುದೆಂದಾಗ ಎಐನಿಂದ ಭಾರತೀಯ ನೈಜ ನ್ಯಾಯಾಂಗ ಕಾರ್ಯ ನಿರ್ವಹಣೆಗೆ ಎದುರಾದ ಅಡ್ಡಿ ಮತ್ತು ಸವಾಲುಗಳನ್ನು ಸಮರ್ಥವಾಗಿ ಪರಿಹರಿಸುವುದು ಪರಿಣಿತರಿಗೆ ಅಸಾಧ್ಯವೇನೂ ಅಲ್ಲ.
ಕೃತಕ ಬುದ್ದಿಮತ್ತೆ ಭಾರತೀಯ ನ್ಯಾಯಾಂಗದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಲ್ಲದೆ ಇದು ಇಂದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಎಐ ಬಳಸಿ ನ್ಯಾಯವಾದಿಗಳಿಂದು ಸಿದ್ದಪಡಿಸುವ ಮಾಹಿತಿ ಪತ್ರಗಳಲ್ಲಿ ಹಲವಾರು ದೋಷಗಳಿರುವುದನ್ನು ಸುಪ್ರೀಂಕೋರ್ಟ್ ಬೊಟ್ಟು ಮಾಡಿದೆ. ಮಿಗಿಲಾಗಿ ಎಐ ಆಧಾರಿತ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಡಿ ಎಂದು ನ್ಯಾಯವಾದಿಗಳಿಗೆ ಸುಪ್ರೀಂಕೋರ್ಟ್ ಈಗ ಎಚ್ಚರಿಕೆ ನೀಡಿದೆ. ಅದೇನೆ ಇರಲಿ. ಎಐ ಈಗ ದೇಶದ ನ್ಯಾಯಾಂಗದ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ್ದು ಹಲವು ಹತ್ತು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಯುವಪೀಳಿಗೆ ಇಂದು ಚಾಟ್‌ಜಿಪಿಟಿ ಅನ್ನೇ ಅಧಿಕವಾಗಿ ನೆಚ್ಚಿಕೊಂಡಿರುವುದು ಗಮನಾರ್ಹ. ಎಲ್ಲವೂ ಈಗ ಚಾಟ್‌ಜಿಪಿಟಿ ಮೂಲಕ ತುದಿ ಬೆರಳಿನಲ್ಲಿ ಮಾಹಿತಿ ದೊರೆಯುವಾಗ ಯಾರು ತಾನೇ ಗ್ರಂಥಾಲಯಗಳಿಗೆ ಹೋಗಿ ಸಂಬಂಧಿತ ಪಠ್ಯವನ್ನು ಪರಾಮರ್ಶಿಸಿ ಮಾಹಿತಿ ಪಡೆಯಲು ಮುಂದಾಗುವರು ? ಇಂದಿನ ಯುವ ವಕೀಲರಿಗೆ ಈ ಬಗೆಯ ತಾಳ್ಮೆ ಮತ್ತು ವ್ಯವದಾನ ಎಲ್ಲಿದೆ ?
ಹೌದು. ಕೃತಕ ಬುದ್ದಿಮತ್ತೆ ಮೂಲಕ ದೊರೆಯುವ ಕೆಲವೊಂದು ಕೇಸ್ ಲಾ ನೀಡುವ ಮಾಹಿತಿ ದೋಷಪೂರಿತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಪ್ರಶ್ನಿಸುವ ಕೆಲಸವೂ ಈಗ ಆಗುತ್ತಿಲ್ಲ. ಕೃತಕ ಬುದ್ದಿಮತ್ತೆಯಲ್ಲಿ ದೊರೆಯುವ ಮಾಹಿತಿಯೇ ಅಧಿಕೃತ ಎನ್ನುವ ಮಟ್ಟದಲ್ಲಿ ಇಂದು ತಪ್ಪು ತಳಹದಿ ರೂಪುಗೊಳ್ಳುತಿರುವುದು ಅಪಾಯಕಾರಿ. ಹಾಗೆಂದು ನಾವು ಇಂದು ನೆಗಡಿ ಬಂದಿದೆ ಎಂದು ಮೂಗು ಕೊಯ್ದುಕೊಳ್ಳಲು ಸಾಧ್ಯವೇ ? ಕೃತಕ ಬುದ್ದಿಮತ್ತೆ ಇಂದು ಎಲ್ಲ ರಂಗಗಳಲ್ಲಿ ವ್ಯಾಪಿಸುತ್ತಿದೆ. ಹೀಗಾಗಿ ಇದು ಒಂದಲ್ಲ ಒಂದು ದಿನ ಭಾರತೀಯ ನ್ಯಾಯಾಂಗಕ್ಕೂ ಅನಿವಾರ್ಯ ಆಗುವ ದಿನಗಳು ದೂರವಿಲ್ಲ. ಆದರೆ ಇದರ ಸಮರ್ಪಕ ಮತ್ತು ಸರಿಯಾದ ಬಳಕೆ ಬಗ್ಗೆ ಕೂಡಾ ಇಂದು ಕಾನೂನುಪಂಡಿತರು ಗಂಭೀರ ಆಲೋಚನೆ ನಡೆಸಬೇಕಿದೆ. ಅಷ್ಟೇ ಅಲ್ಲ. ದೋಷಗಳಿಗೆ ಪರಿಹಾರ ಕಂಡು ಹಿಡಿದು ದೋಷಗಳನ್ನು ನಿವಾರಿಸುವ ಕೆಲಸವೂ ಈಗ ಅಗತ್ಯವಾಗಿ ಆಗಬೇಕಿದೆ.
ಕಾಲದ ವೇಗವನ್ನು ಕಟ್ಟಿ ಹಾಕಿ ಇಂದಿನ ಪ್ರಪಂಚ ಮುಂದೆ ಸಾಗಲು ಸಾಧ್ಯವಿಲ್ಲ. ಕಾಲದ ಜೊತೆಯ ಪಯಣ ಮುಂದಿನ ಪೀಳಿಗೆಯ ದೃಷ್ಟಿಯಿಂದ ಅತಿ ಮುಖ್ಯ. ತಂತ್ರಜ್ಞಾನದಲ್ಲಿ ಮೊದಲು ಮೊದಲು ಈ ಬಗೆಯ ದೋಷಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಆದರೆ ಇದನ್ನು ನಿವಾರಿಸುವ ಶಕ್ತಿ ಇರುವುದು ಕೂಡಾ ಬುದ್ದಿವಂತ ಮನುಷ್ಯನ ಕೈಯಲ್ಲಿಯೇ. ಈ ಕೆಲಸವಿಂದು ನ್ಯಾಯಾಂಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನಿವಾರ್ಯ ಆಗಿದೆ. ಯಾವ್ಯಾವ ಕೇಸ್ ಲಾ ದೋಷಪೂರಿತವಾಗಿ ಎಐಗೆ ಫೀಡ್ ಆಗಿದೆ, ಅವುಗಳನ್ನು ತಿದ್ದುವ ಮತ್ತು ಸರಿಯಾಗಿ ಪರಿಷ್ಕರಿಸುವ ಕಾರ್ಯಕ್ಕೆ ಈಗ ಒತ್ತು ದೊರೆಯಬೇಕಿದೆ. ಒಂದು ಕಡೆ ಎಂಜನಿಯರಿಂಗ್ ಪರೀಕ್ಷೆ ಮುಗಿದ ಕೇವಲ ಐದೇ ನಿಮಿಷಗಳಲ್ಲಿ ಫಲಿತಾಂಶ ಘೋಷಣೆ ಆಗುವುದೆಂದಾಗ ಎಐನಿಂದ ನೈಜ ನ್ಯಾಯಾಂಗ ಕಾರ್ಯ ನಿರ್ವಹಣೆಗೆ ಎದುರಾದ ಸವಾಲುಗಳನ್ನು ಸಮರ್ಥವಾಗಿ ಪರಿಹರಿಸುವುದು ಪರಿಣಿತರಿಗೆ ಅಸಾಧ್ಯವೇನೂ ಅಲ್ಲ.


