“ಮುಂದಿನ ಆರು ತಿಂಗಳು ತಿರುಪತಿ ತಿರುಮಲ ಸನ್ನಿಧಾನಕ್ಕೆ ಬಮುಲ್ ನಿಂದ ತಿಂಗಳಿಗೆ 2 ಲಕ್ಷ ಕೆ.ಜಿ ತುಪ್ಪ ಸರಬರಾಜು ಮಾಡಲಾಗುತ್ತದೆ. ಪ್ರತಿವರ್ಷ ಕೆಎಂಎಫ್ ನಿಂದ ತುಪ್ಪ ಸರಬರಾಜು ಮಾಡಲಾಗುತ್ತಿತ್ತು” ಎಂದು ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಕಚೇರಿಯಲ್ಲಿ ಸುರೇಶ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ತಿರುಪತಿಗೆ ತುಪ್ಪ ಪೂರೈಕೆ ವಾಹನಕ್ಕೆ ಬಮುಲ್ ನಿರ್ದೇಶಕರು, ಅಧಿಕಾರಿಗಳ ಜತೆಗೆ ಹಸಿರು ಬಾವುಟ ತೋರಿ ಬೀಳ್ಕೊಟ್ಟರು.
“ತಿರುಪತಿಗೆ ನಂದಿನಿ ತುಪ್ಪ ಪೂರೈಕೆಗೆ ನಾವು ಟೆಂಡರ್ ಪಡೆದಿದ್ದು, ಇದರ ಮೊತ್ತ 136 ಕೋಟಿ ರೂಪಾಯಿಗಳು. ಪ್ರತಿನಿತ್ಯ 12.5 ಟನ್ ನಂತೆ ಮುಂದಿನ ಆರು ತಿಂಗಳು ತುಪ್ಪ ಸರಬರಾಜಾಗಲಿದೆ. ಬಮುಲ್ ಒಕ್ಕೂಟ ಟಿಟಿಡಿ ಜೊತೆ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ಈ ಸರಬರಾಜು ಮಾಡುತ್ತಿದೆ. ಗುಣಮಟ್ಟದಲ್ಲಿ, ರುಚಿಯಲ್ಲಿ ನಂದಿನಿ ತುಪ್ಪ ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ಗಳಿಸಿದೆ” ಎಂದರು.
“ಸಾಗಾಣಿಕೆಗೆ ಡಿಜಿಟಲ್ ಲಾಕ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ನಾವು ಕೊಟ್ಟ ಪಾಸ್ ವರ್ಡ್ ಅಲ್ಲಿ ನಮೂದಿಸಿದರೆ ಮಾತ್ರ ತೆರೆಯಬಹುದು. ಗ್ರಾಹಕರಿಗೂ ಇದೇ ರೀತಿ ಗುಣಮಟ್ಟದ ಪದಾರ್ಥ ನೀಡುತ್ತಿದ್ದೇವೆ” ಎಂದು ಹೇಳಿದರು.
“ಕನಕಪುರ ಮೆಗಾ ಡೈರಿ ಪ್ಲಾಂಟ್ ಸತತ ಮೂರನೇ ಬಾರಿಗೆ ಸಿಐಎ ಅವಾರ್ಡ್ ಅನ್ನು ಪಡೆದುಕೊಂಡಿದೆ. ಸ್ವಚ್ಚತೆ, ಗುಣಮಟ್ಟ ಕಾಪಾಡಿದ ಒಕ್ಕೂಟದ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಹೆಚ್ಚಿನ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟ ಉತ್ಪನ್ನಗಳನ್ನು ಜನರಿಗೆ ನೀಡಬೇಕು. ನಿರ್ದೇಶಕರು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು.
ದರ ಏರಿಕೆ ವಿಚಾರವಾಗಿ ಕೇಳಿದಾಗ, “ಸದ್ಯಕ್ಕೆ ದರ ಏರಿಕೆ ಪ್ರಸ್ತಾವನೆಗಳು ಇಲ್ಲ. ಹಾಲಿನ ದರ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಅಧ್ಯಯನ ಮಾಡಲಾಗುವುದು. ಉತ್ಪನ್ನಗಳ ಪ್ಯಾಕಿಂಗ್ ಸಲಕರಣೆಗಳ ಖರೀದಿ ವೆಚ್ಚ ಹೆಚ್ಚಳವಾಗುತ್ತಿದೆ. ಉದಾಹರಣಗೆ ಪ್ಲಾಸ್ಟಿಕ್ ಕ್ರೇಟ್, ಪ್ಯಾಕಿಂಗ್ ಕವರ್. ಅಲ್ಲದೇ ಶುದ್ದೀಕರಣ ರಾಸಾಯನಿಕಗಳನ್ನು ವಿದೇಶದಿಂದಲೇ ತರಿಸಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಕೆಎಂಎಫ್ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ಚಿಂತನೆ ಮಾಡುತ್ತೇವೆ. ನಾವು ಗುಣಮಟ್ಟದ ಪದಾರ್ಥ ನೀಡಬೇಕು ಎನ್ನುವ ಗುರಿ ಹೊಂದಿದ್ದೇವೆ” ಎಂದು ತಿಳಿಸಿದರು.
“ಮಾರುಕಟ್ಟೆಯಲ್ಲಿ ಅರ್ಧ ಲೀಟರ್ ಹಾಲಿಗೆ ಬೇಡಿಕೆಯಿದೆ. ಅದರ ಬೆಲೆ ಹೆಚ್ಚಿದೆ. ಒಂದು ಲೀಟರ್ ಹಾಲಿನ ಬೆಲೆ ಕಡಿಮೆಯಿದೆ. ಒಂದೊಂದು ಒಕ್ಕೂಟದಲ್ಲಿ ಒಂದೊಂದು ಹಾಲಿನ ದರವಿದೆ.ಮಳೆಗಾಲ ಬಂದ ತಕ್ಷಣ 10-15 ಲಕ್ಷ ಲೀಟರ್ ಹಾಲಿನ ಸರಬರಾಜು ಹೆಚ್ಚಾಗಲಿದೆ. ಕಳೆದ ವರ್ಷ ರಾಜ್ಯದಲ್ಲಿ 1.5 ಕೋಟಿ ಲೀಟರ್ ಹಾಲು ಬರುತಿತ್ತು. ಬಮುಲ್ ನಿಂದ 14 ಲಕ್ಷ ಲೀಟರ್ ಹಾಲನ್ನು ತೆಗೆದುಕೊಳ್ಳುತ್ತಿದ್ದೇವೆ. ಬೇಸಿಗೆಯಲ್ಲಿ 17.5 ಲಕ್ಷ ಲೀಟರ್ ಹಾಲು ಬರುತ್ತಿದೆ. ನಮ್ಮ ಗುರಿ 21 ಲಕ್ಷ ಲೀಟರ್ ಹಾಲು. ನಾವು ಹಾಲಿಗಿಂತ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದೇವೆ” ಎಂದರು.
ಬಮುಲ್ ನಿಂದ ತುಪ್ಪವನ್ನ ಏಕೆ ಸರಬರಾಜು ಮಾಡಲಾಗುತ್ತಿದೆ ಎಂದು ಕೇಳಿದಾಗ, “ಸಂಗ್ರಹಣೆ ಮುಖ್ಯವಾದುದು. ಇದಕ್ಕೆ ನಾವು ಕಳೆದ 6 ತಿಂಗಳಿನಿಂದ ತಯಾರಿ ಮಾಡಿಕೊಂಡಿದ್ದೆವು. ನಮ್ಮಲ್ಲಿ ಸರಬರಾಜು ಶಕ್ತಿ ಇಲ್ಲದೇ ಹೋದರೆ ಟೆಂಡರ್ ಪಡೆದ ಮೇಲೆ ಕಷ್ಟ ಪಡಬೇಕಾಗುತ್ತದೆ. ಅದಕ್ಕೆ ಸಿದ್ದತೆ ಮಾಡಿಕೊಂಡು ನಾವು ಟೆಂಡರ್ ಪಡೆದೆವು” ಎಂದು ಉತ್ತರಿಸಿದರು.
“ಗುಡ್ ನ್ಯೂಸ್ ಬಗ್ಗೆ ನನಗೆ ಗೊತ್ತಿಲ್ಲ. ಪ್ರತಿಸಲವೂ ಗುಡ್ ನ್ಯೂಸ್ ಇದ್ದೇ ಇರುತ್ತದೆ. ಕೆಲವೊಂದು ಸಲ ಪಕ್ಷದ ಕೆಲಸ, ಇನ್ನೊಮ್ಮೆ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗುತ್ತಿರುತ್ತೇವೆ. ಆಗಾಗ್ಗೆ ಸರ್ಕಾರದ ಕೆಲಸಗಳಿಗೂ ಹೋಗಿರುತ್ತೇವೆ. ಇದರಲ್ಲಿ ವಿಶೇಷತೆ ಏನೂ ಇಲ್ಲ” ಎಂದು ಹೇಳಿದರು.
ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲವೇ ಎಂದು ಕೇಳಿದಾಗ, “ಈ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದೇವೆ” ಎಂದರು.
ಶಾಸಕರ ಒತ್ತಡ ಹೆಚ್ಚಾಗಿರುವ ಬಗ್ಗೆ ಕೇಳಿದಾಗ, “ಮಂತ್ರಿಗಳಾಗಬೇಕು ಎಂಬ ಒತ್ತಡ ಇದೆ” ಎಂದು ಪ್ರತಿಕ್ರಿಯಿಸಿದರು. ಈ ಬಾರಿಯ ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾನು ಹಾಗೂ ಶಿವಕುಮಾರ್ ಅವರು ಆಗಾಗ್ಗೆ ದೆಹಲಿಗೆ ಹೋಗುತ್ತಲೇ ಇರುತ್ತೇವೆ. ಅಪರೂಪಕ್ಕೆ ಹೋಗುವುದಾದರೆ ನೀವು ಕೇಳಬೇಕಿತ್ತು. ತಿಂಗಳಿಗೆ ಎರಡು ಸಲವಾದರೂ ಹೋಗುತ್ತೇವೆ” ಎಂದರು.


