ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ನಿಭಾಯಿಸುವಾಗ ಕಾನೂನು ಜಾರಿ ಸಂಸ್ಥೆಗಳು ಸಂಯಮದಿಂದ ವರ್ತಿಸಬೇಕು. ವಿದ್ಯಾರ್ಥಿಗಳ ವಿರುದ್ಧ ಅತಿ ಬಲಪ್ರಯೋಗ ಬೇಡ ಎಂದು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಕೆಲವು ದಾರಿ ತಪ್ಪಿದ ಅಂಶಗಳು ಶಕ್ತಿಗಳು ಕಲ್ಲು ತೂರಾಟ ನಡೆಸಿದರೂ ಯುವಕರಿಗೆ ಸೂಕ್ತ ಸಲಹೆ ನೀಡಿ, ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಜುಲೈ 20ರಂದು ನಡೆದ ‘ಸಂಸದ್ ಚಲೋ’ ಆಯೋಜಕರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ವಿಚಾರಣೆಗೆ ಅಂಗೀಕರಿಸಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಮತ್ತೊಂದು ಅರ್ಜಿಯೊಂದಿಗೆ ಇದನ್ನು ಜೋಡಿಸಿದೆ.
ಅರ್ಜಿದಾರ ಹಾಗೂ ನಿವೃತ್ತ ವಾಯುಪಡೆಯ ಅಧಿಕಾರಿ ಮನೀಷ್ ಕುಮಾರ್ ಸೋಲಂಕಿ ಪರ ವಕೀಲ ರಿಜ್ವಾನ್ ಅಹ್ಮದ್ ವಾದ ಮಂಡಿಸಿ, ಪ್ರತಿಭಟನೆ ನಡೆದು 15 ದಿನಗಳಾದರೂ ಆಯೋಜಕರ ವಿರುದ್ಧ ಯಾವುದೇ ಹೊಣೆಗಾರಿಕೆ ನಿಗದಿಯಾಗಿಲ್ಲ ಎಂದರು. ಅವರು ವಾಹಿನಿಯಿಂದ ವಾಹಿನಿಗೆ ತೆರಳಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪರಿಸ್ಥಿತಿಯನ್ನು ಶಾಂತಗೊಳಿಸುವ ಬದಲು ಮತ್ತಷ್ಟು ಉಲ್ಬಣಗೊಳಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಾನೂನು ಮತ್ತು ಸುವ್ಯವಸ್ಥೆ ಘಟನೆ ಉಲ್ಲೇಖಿಸಿದ ವಕೀಲರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಹೆಸರಿನಲ್ಲಿ ಸರ್ಕಾರಗಳು ಅತಿ ಮೃದು ಧೋರಣೆ ತಾಳಬಾರದು ಎಂದು ವಾದಿಸಿದರು.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳು ಅತಿ ಮೃದು ಧೋರಣೆ ತೋರಿದರೆ, ದೇಶದ ಇತರ ಭಾಗಗಳಲ್ಲಿಯೂ ಪ್ರತಿಭಟನೆಗಳನ್ನು ನಿಭಾಯಿಸುವಲ್ಲಿ ಅದು ಮಾದರಿಯಾಗಬಹುದು. ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಕೆಲವರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದರೂ ಯುವ ಪ್ರತಿಭಟನಾಕಾರರಿಗೆ ಸಲಹೆ ನೀಡಿ, ಅವರನ್ನು ಶಾಂತಗೊಳಿಸುವುದೇ ಸೂಕ್ತ ಮಾರ್ಗ. ಅವರಿಗೆ ಮಾರ್ಗದರ್ಶನ ಮತ್ತು ಸಮಾಲೋಚನೆ ಅಗತ್ಯ. ರಾಜ್ಯದಿಂದ ಆಕ್ರಮಣಕಾರಿ ಕ್ರಮಗಳು ನಡೆದರೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡು ಹಿಂಸಾಚಾರ ಹೆಚ್ಚಾಗಬಹುದು. ಅದನ್ನು ತಪ್ಪಿಸಬೇಕು ಎಂದು ಹೇಳಿದರು.
ಹಿಂಸಾಚಾರದಲ್ಲಿ ಭಾಗಿಯಾದವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಪ್ರತಿಭಟನಾಕಾರರು ಸಂಸತ್ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ್ದರೆ ಅದರ ಭದ್ರತಾ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರ್ಟ್‌ಗೆ ವಿವರಿಸಿದರು.
ಹಿಂಸಾಚಾರ ನಡೆದರೂ ಪೊಲೀಸರು ಅತ್ಯಂತ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು ಮತ್ತು ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸುವುದೇ ಆದ್ಯತೆ. ಶಾಂತಿಯುತ ಮೆರವಣಿಗೆಗೆ ಅವಕಾಶ ನೀಡಿ, ಯಾವುದೇ ಘಟನೆ ನಡೆದರೂ ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ಪೊಲೀಸರು ಸಂಯಮದಿಂದ ವರ್ತಿಸಬೇಕು. ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಪ್ರತಿಭಟನಾಕಾರರ ಮಾತು ಆಲಿಸುವುದೇ ಹಿಂಸಾಚಾರ ತಡೆಯುವ ಪರಿಣಾಮಕಾರಿ ಮಾರ್ಗಅವರು ಏಕೆ ಕೂಗುತ್ತಿದ್ದಾರೆ ಎಂಬುದನ್ನು ಮೊದಲು ಕೇಳಿ, ಅರ್ಥಮಾಡಿಕೊಳ್ಳಿ ಎಂದರು.
ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಿರ್ಧರಿಸಲು ಕಾನೂನು ಜಾರಿ ಸಂಸ್ಥೆಗಳೇ ಸೂಕ್ತ. ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದವರನ್ನು ಗುರುತಿಸಿ, ಅವರಿಗೆ ಸಮುದಾಯ ಸೇವೆ ಕಡ್ಡಾಯಗೊಳಿಸುವಂತೆ ಅರ್ಜಿಯಲ್ಲಿ ಕೇಳಿಕೊಳ್ಳಲಾಗಿದೆ.


