Menu

ವಿಷಕಾರಿ ದತ್ತೂರಿ ಬೀಜ ಮಾರಾಟ: ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌, ಬಿಗ್‌ಬಾಸ್ಕೆಟ್‌ ಲೈಸನ್ಸ್‌ ಅಮಾನತು

ವಿಷದ ಅಂಶ ಒಳಗೊಂಡಿರುವ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಆಹಾರ ಪದಾರ್ಥಗಳ ರೀತಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಹಾಗೂ ಬಿಗ್‌ಬಾಸ್ಕೆಟ್‌ ಸಂಸ್ಥೆಗಳ ಆಹಾರ ಪೂರೈಕೆ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದಾದ ದತ್ತೂರಿ ಹಣ್ಣು ಮತ್ತು ಬೀಜಗಳು ಆನ್‌ಲೈನ್‌ ವೇದಿಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿವೆ ಎಂಬ ದೂರುಗಳು ಇಲಾಖೆಗೆ ಬಂದಿದ್ದವು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಕೆಲವು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ದತ್ತೂರಿ ಉತ್ಪನ್ನಗಳನ್ನು ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಈ ಉತ್ಪನ್ನಗಳನ್ನು ಸಂಸ್ಥೆಗಳ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದು, ಆಹಾರ ಸುರಕ್ಷತಾ ನಿಯಮಗಳಿಗೆ ವಿರುದ್ಧವಾಗಿ ಅಪಾಯಕಾರಿ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸಿರುವ ಆರೋಪದ ಹಿನ್ನೆಲೆ ಇಲಾಖೆ ಸಂಸ್ಥೆಗಳಿಗೆ ವಿವರಣೆ ನೀಡುವಂತೆ ನೋಟಿಸ್‌ ಜಾರಿ ಮಾಡಿತ್ತು.

ನೋಟಿಸ್‌ಗೆ ಅಮೆಜಾನ್‌ ಸಮರ್ಪಕ ಉತ್ತರ ನೀಡಿಲ್ಲ, ಸ್ವಿಗ್ಗಿ ಮತ್ತು ಇನ್‌ಸ್ಟಾಮಾರ್ಟ್‌ ಸಮಯಾವಕಾಶ ಕೋರಿತ್ತು. ಬಿಗ್‌ಬಾಸ್ಕೆಟ್‌ ಇದರ ಮಾರಾಟ ಸ್ಥಗಿತಗೊಳಿದ್ದಾಗಿ  ತಿಳಿಸಿತ್ತು. ಸಂಸ್ಥೆಗಳು ನೀಡಿದ ವಿವರಣೆಗಳು ಇಲಾಖೆಗೆ ತೃಪ್ತಿಕರವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಪೂರೈಸುತ್ತಿದ್ದ ಕೆಲವು ಸರಬರಾಜುದಾರರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು, ಪರವಾನಗಿ ರದ್ದುಗೊಳಿಸಲಾಗಿದೆ.

ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ದತ್ತೂರಿಗೆ ಸಂಬಂಧಿಸಿದ ಜಾಹೀರಾತುಗಳು, ಉತ್ಪನ್ನ ಪಟ್ಟಿಗಳು ಮತ್ತು ಮಾರಾಟ ಲಿಂಕ್‌ಗಳನ್ನು ತಕ್ಷಣ ತೆಗೆದುಹಾಕುವಂತೆ ಇಲಾಖೆ ಸೂಚಿಸಿದೆ.

Related Posts

Leave a Reply

Your email address will not be published. Required fields are marked *