Wednesday, November 25, 2026
Menu

ಖರ್ಗೆ ಕೋಟೆಯಲ್ಲಿ ಇಂದು ಬಿಜೆಪಿ ಪಾದಯಾತ್ರೆ!

ಉದಯಕಾಲ ನ್ಯೂಸ್, ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಹಾಗೂ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಕಲಬುರಗಿಯಲ್ಲಿ ಇಂದು (ನವೆಂಬರ್ 25) ಭಾರತೀಯ ಜನತಾ ಪಕ್ಷ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕೇಂದ್ರ ಬಿಜೆಪಿ ವತಿಯಿಂದ ದೇಶವ್ಯಾಪಿ ಹಮ್ಮಿಕೊಂಡಿರುವ ಲೋಕತಂತ್ರ ಬಚಾವೋ, ಅರಾಜಕತೆ ಹಠಾವೋ  ಅಭಿಯಾನದ ಅಡಿಯಲ್ಲಿ ಇಂದು ಕಲಬುರಗಿ ನಗರದಲ್ಲಿ ಬೃಹತ್ ಪಾದಯಾತ್ರೆ ಮತ್ತು ಸಾರ್ವಜನಿಕ ಸಮಾವೇಶ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ವತಃ ಈ ಪಾದಯಾತ್ರೆಯ ನೇತೃತ್ವ ವಹಿಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆ ವಿವಾದಕ್ಕೆ ಬಿಜೆಪಿ ತಿರುಗೇಟು

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಪಕ್ಷಗಳು ದೇಶಾದ್ಯಂತ ಅಪಪ್ರಚಾರ ನಡೆಸಿ, ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂಬುದು ಬಿಜೆಪಿ ನಾಯಕರ ಪ್ರಮುಖ ಆರೋಪವಾಗಿದೆ. ವಿಪಕ್ಷಗಳ ಈ ತಂತ್ರಕ್ಕೆ ತಿರುಗೇಟು ನೀಡಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಬಿಜೆಪಿ ವತಿಯಿಂದ ದೇಶದ ಆಯ್ದ ಪ್ರಮುಖ ಸ್ಥಳಗಳಲ್ಲಿ ‘ಲೋಕತಂತ್ರ ಬಚಾವೋ, ಅರಾಜಕತೆ ಹಠಾವೋ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವೆಂದರೆ, ಈ ರಾಷ್ಟ್ರೀಯ ಅಭಿಯಾನಕ್ಕಾಗಿ ಇಡೀ ಕರ್ನಾಟಕ ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಮೂಲಕ ಕಾಂಗ್ರೆಸ್ ನಾಯಕರಿಗೆ ನೇರ ರಾಜಕೀಯ ಸಂದೇಶ ರವಾನಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಗಂಜ್ ಪ್ರದೇಶದಿಂದ ಜಗತ್ ವೃತ್ತದವರೆಗೆ ಬೃಹತ್ ಮೆರವಣಿಗೆ

ಇಂದು ಮಧ್ಯಾಹ್ನ 2:30ರ ಸುಮಾರಿಗೆ ಕಲಬುರಗಿ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಮುಂಭಾಗದಿಂದ ಈ ಬೃಹತ್ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಅಲ್ಲಿಂದ ಆರಂಭವಾಗುವ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಐತಿಹಾಸಿಕ ಜಗತ್ ವೃತ್ತದವರೆಗೆ ತಲುಪಲಿದೆ. ಈ ಪಾದಯಾತ್ರೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯನ್ನು ಪಕ್ಷ ಹೊಂದಿದೆ. ಪಾದಯಾತ್ರೆ ಮುಕ್ತಾಯಗೊಂಡ ಬಳಿಕ ಜಗತ್ ವೃತ್ತದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಭೆ ನಡೆಯಲಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ರಾಜೂಗೌಡ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವು ಪ್ರಮುಖ ನಾಯಕರು ಸಾಥ್ ನೀಡಲಿದ್ದಾರೆ.

ರಾಜನಾಥ್ ಸಿಂಗ್ ಮತ್ತು ಬಿ.ವೈ. ವಿಜಯೇಂದ್ರ ಟ್ವೀಟ್ ಸಂದೇಶ

ಕಲಬುರಗಿ ಭೇಟಿಯ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನವೆಂಬರ್ 25ರಂದು ನಾನು ಕರ್ನಾಟಕದ ಕಲಬುರಗಿಯಲ್ಲಿ ನಡೆಯಲಿರುವ ‘ಲೋಕತಂತ್ರ ಬಚಾವೋ, ಅರಾಜಕತೆ ಹಠಾವೋ’ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತೇನೆ. ಈ ಪಾದಯಾತ್ರೆಯನ್ನು ಎದುರು ನೋಡುತ್ತಿದ್ದೇನೆ ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ಟ್ವೀಟ್ ಮೂಲಕ ಕೇಂದ್ರ ಸಚಿವರನ್ನು ಸ್ವಾಗತಿಸಿದ್ದು, ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಸುಶಾಸನದ ಸಂಕಲ್ಪದೊಂದಿಗೆ, ಕಲ್ಯಾಣ ಕರ್ನಾಟಕದ ಪವಿತ್ರ ನೆಲದಲ್ಲಿ ಇಂದು ಪಕ್ಷದ ವತಿಯಿಂದ ನಡೆಯುತ್ತಿರುವ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಬೃಹತ್ ಪಾದಯಾತ್ರೆಯ ನೇತೃತ್ವ ವಹಿಸಿಕೊಳ್ಳಲು ಕಲಬುರಗಿಗೆ ಆಗಮಿಸುತ್ತಿರುವ ಕೇಂದ್ರ ರಕ್ಷಣಾ ಸಚಿವರಾದ ಸನ್ಮಾನ್ಯ ರಾಜನಾಥ್ ಸಿಂಗ್ ಜೀ ಅವರಿಗೆ ರಾಜ್ಯದ ಸಮಸ್ತ ಕಾರ್ಯಕರ್ತರ ಪರವಾಗಿ ಅಭಿಮಾನಪೂರ್ವಕ ಸುಸ್ವಾಗತ! ದೇಶದಲ್ಲಿ ಪ್ರಜಾತಂತ್ರವನ್ನು ದುರ್ಬಲಗೊಳಿಸಿ, ಅರಾಜಕತೆ ಸೃಷ್ಟಿಸುವ ವಿಪಕ್ಷಗಳ ಷಡ್ಯಂತ್ರಗಳನ್ನು ಮಟ್ಟಹಾಕಲು ಜನಾಂದೋಲನ ರೂಪಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ನಡೆಸಲಾಗುತ್ತಿದ್ದು, ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಜಾತಂತ್ರವನ್ನು ಬಲಪಡಿಸೋಣ ಎಂದು ಕರೆ ನೀಡಿದ್ದಾರೆ.

ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾದ ಕಲಬುರಗಿ

ಮತ್ತೊಂದೆಡೆ, ರಾಜನಾಥ್ ಸಿಂಗ್ ಅವರ ಕಲಬುರಗಿ ಭೇಟಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಕರ್ನಾಟಕಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಮೊದಲು, ಆಳಂದ ಮತಪಟ್ಟಿ ಅಕ್ರಮ ಪ್ರಕರಣದ ಆರೋಪಪಟ್ಟಿಯಲ್ಲಿ ದಾಖಲಿಸಿರುವ ಸಾಕ್ಷ್ಯಗಳಿಗೆ ಬಿಜೆಪಿ ಉತ್ತರ ನೀಡಬೇಕು ಎಂದು ತಿರುಗೇಟು ನೀಡಿದ್ದಾರೆ. ಒಟ್ಟಾರೆಯಾಗಿ, ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿರುವ ಈ ಬೃಹತ್ ಪಾದಯಾತ್ರೆಯ ಮೂಲಕ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಸರ್ಕಾರ ಹಾಗೂ ಹೈಕಮಾಂಡ್ ವಿರುದ್ಧ ಯಾವ ರೀತಿಯ ವಾಗ್ದಾಳಿ ನಡೆಸಲಿದ್ದಾರೆ ಮತ್ತು ಕಲ್ಯಾಣ ಕರ್ನಾಟಕದ ರಾಜಕಾರಣಕ್ಕೆ ಯಾವ ಹೊಸ ಸಂದೇಶ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

#RajnathSingh #Kalaburagi #BJP #LoktantraBachao #BYVijayendra #MallikarjunKharge #KarnatakaPolitics #KalyanaKarnataka #Udayakala #KannadaNews

Related Posts

Leave a Reply

Your email address will not be published. Required fields are marked *