Thursday, November 05, 2026
Menu

ಇ-ಆಸ್ತಿಗೆ 10 ಸಾವಿರ ರೂ. ಲಂಚ: ಪುರಸಭೆ ಮುಖ್ಯಾಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಉದಯಕಾಲ ನ್ಯೂಸ್, ಬಾಗಲಕೋಟೆ: ಮನೆಯ ಇ-ಆಸ್ತಿ ಉತಾರ ಮಾಡಿಕೊಡಲು ಸಾರ್ವಜನಿಕರ ಬಳಿ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುತ್ತಿದ್ದ ವೇಳೆ ತೇರದಾಳ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಮೂವರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

ತೇರದಾಳ ನಿವಾಸಿ ರಾಜೇಸಾಬ ಮಹಮ್ಮದ ಹುಸೇನ್ ನಾಗರ್ಜಿ ಎಂಬುವವರು ನವೆಂಬರ್ 3ರಂದು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದರು. ಫಿರ್ಯಾದಿದಾರರ ಸಂಬಂಧಿ ಹಸೀನಾ ಅಬ್ದುಲ್ ಕೊರಬು ಅವರ ಹೆಸರಿನಲ್ಲಿರುವ ತೇರದಾಳ ಪುರಸಭೆ ವ್ಯಾಪ್ತಿಯ ಆಸ್ತಿ ನಂ. 574/25ರ ಪ್ಲಾಟ್ ನಂ. 13ರ ಇ-ಆಸ್ತಿ ಉತಾರ (E-Khata) ಮಾಡಿಕೊಡಲು ಆರೋಪಿಗಳು ಹತ್ತು ಸಾವಿರ ರೂಪಾಯಿ ಲಂಚಕ್ಕೆ ಪೀಡಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು

ದೂರುದಾರರ ಅಳಲನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಪೊಲೀಸರು ಯೋಜಿತ ದಾಳಿ ನಡೆಸಿದರು. ನವೆಂಬರ್ 4ರಂದು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ತೇರದಾಳ ಪುರಸಭೆಯ ಮುಖ್ಯಾಧಿಕಾರಿ ಇರ್ಫಾನ್ ಬಾಬುಸಾಬ ಝಾರೆ, ಹೊರಗುತ್ತಿಗೆ ನೌಕರರಾದ ಇಬ್ರಾಹಿಂ ಮಹಾಲಿಂಗಪೂರ ಹಾಗೂ ಶಿವಾನಂದ ಕಾಂಬಳೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಕೈಯಾರೆ ಬಂಧಿಸುವಲ್ಲಿ ಯಶಸ್ವಿಯಾದರು.

ಕರ್ನಾಟಕ ಲೋಕಾಯುಕ್ತ ಬಾಗಲಕೋಟೆಯ ಡಿಎಸ್‌ಪಿ ಸುರೇಶರೆಡ್ಡಿ ಎಂ.ಎಸ್. ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿತು. ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮಲ್ಲಿಕಾರ್ಜುನ ಬಿ. ಬಿರಾದಾರ, ಎನ್.ಆರ್. ಖಿಲಾರೆ ಹಾಗೂ ಪೊಲೀಸ್ ಸಿಬ್ಬಂದಿ ಈ ದಾಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಂದಿನ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
#LokayuktaRaid #BagalkotNews #TeradalTownMunicipal #CorruptionFree #EKhata #UdayakalaNews

Related Posts

Leave a Reply

Your email address will not be published. Required fields are marked *