ಉದಯಕಾಲ ನ್ಯೂಸ್, ಬೆಳಗಾವಿ: 1 ಲಕ್ಷ ರೂಪಾಯಿ ನಗದು ನೀಡಿದರೆ ಖಾತೆಗೆ 1 ಲಕ್ಷ 30 ಸಾವಿರ ರೂಪಾಯಿ ಜಮಾ ಮಾಡುವುದಾಗಿ ಆಮಿಷವೊಡ್ಡಿ, ಐವರಿಂದ ಒಟ್ಟು 2.68 ಕೋಟಿ ರೂಪಾಯಿ ನಗದು ಸಂಗ್ರಹಿಸಿ ನಂತರ ಪೂರ್ವಯೋಜಿತ ಸಂಚಿನಂತೆ ದರೋಡೆ ಮಾಡಿದ್ದ ಕುಖ್ಯಾತ ಪ್ರಕರಣವನ್ನು ಮೂಡಲಗಿ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಡಿಆರ್ ಕಾನ್‌ಸ್ಟೇಬಲ್ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಬರೋಬ್ಬರಿ 2.39 ಕೋಟಿ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಮನಿ ಡಬ್ಲಿಂಗ್ ಆಮಿಷ, ಖಾರದ ಪುಡಿ ಹಾಕಿ ದರೋಡೆ
ಅಕ್ಟೋಬರ್ 30ರ ರಾತ್ರಿ ಈ ದರೋಡೆ ನಡೆದಿದ್ದು, ಕಲ್ಮೇಶ ಬಸವರಾಜ ರಂಗಾಪುರ ಎಂಬುವರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳಲ್ಲಿ ಒಬ್ಬನಾದ ಡಿಆರ್ ಕಾನ್‌ಸ್ಟೇಬಲ್ ಚಿದಾನಂದ ಸಿದ್ಧಾರೂಢ ಕುರಬೇಟ್, ಹೆಚ್ಚು ಹಣ ನೀಡುವುದಾಗಿ ನಂಬಿಸಿ ಚನ್ನಬಸಪ್ಪ, ಬೀರಪ್ಪ, ಕಲ್ಮೇಶ ಹಾಗೂ ಶಂಕರ ಸೇರಿದಂತೆ ಹಲವರ ಮೂಲಕ ಒಟ್ಟು 2.68 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದನು. ಬಳಿಕ ಹಣವನ್ನು ಒಂದು ಶೆಡ್‌ನಲ್ಲಿ ಎಣಿಕೆ ಮಾಡೋಣ ಎಂದು ಬೀರಪ್ಪ ಅವರ ಶೆಡ್‌ಗೆ ಹಣ ತರಿಸಿಕೊಂಡಿದ್ದನು.
ಹಣ ಎಣಿಸುತ್ತಿದ್ದ ವೇಳೆ ಚಿದಾನಂದನ ಸಂಚಿನಂತೆ ಮಾರಕಾಸ್ತ್ರಗಳು ಹಾಗೂ ಖಾರದಪುಡಿಯೊಂದಿಗೆ ನುಗ್ಗಿದ ಮಾರುತಿ ಅರಭಾವಿ, ಸಂಜು ಅರಭಾವಿ, ರಾಜಾರಾಮ ಮಾಳ್ಯಾಗೋಳ ಮತ್ತಿತರರು ಚನ್ನಬಸಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ, ಹಗ್ಗದಿಂದ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದರು. ಬಳಿಕ 5 ಬ್ಯಾಗ್‌ಗಳಲ್ಲಿದ್ದ ಒಟ್ಟು 2.68 ಕೋಟಿ ರೂ. ನಗದು ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.
ಆರೋಪಿಗಳ ಬಂಧನ, ಎಸ್‌ಪಿ ಎಚ್ಚರಿಕೆ ಹಾಗೂ ಶ್ಲಾಘನೆ
ಮೂಡಲಗಿ ಪೊಲೀಸರ ಕಾರ್ಯಾಚರಣೆಯಲ್ಲಿ ಚಿದಾನಂದ ಕುರಬೇಟ್, ರಾಜಾರಾಮ ಮಾಳ್ಯಾಗೋಳ, ರಮೇಶ ಮಾಳ್ಯಾಗೋಳ, ವಿಠಲ ಮಾಳ್ಯಾಗೋಳ, ಸಂಜೀವ ಅರಭಾವಿ, ಮಾರುತಿ ಅರಭಾವಿ, ಪ್ರಕಾಶ ಮೇಳವಂಕಿ ಹಾಗೂ ರಾಘವೇಂದ್ರ ಕೊಪ್ಪದ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 2.39 ಕೋಟಿ ರೂ. ಹಣ, 2 ಬೈಕ್, 1 ಕಾರು ಮತ್ತು ಹಣ ಎಣಿಕೆ ಯಂತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಮಪ್ಪಾ ತಳವಾರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್‌ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಗೋಕಾಕ್ ಸುತ್ತಮುತ್ತ ಮನಿ ಡಬ್ಲಿಂಗ್ ವಂಚನೆಗಳು ಹೆಚ್ಚಾಗುತ್ತಿದ್ದು, ಅತಿ ಆಸೆಗೆ ಬಲಿಪಶುವಾಗದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಡಿಎಸ್‌ಪಿ ರವಿ ನಾಯಕ್ ನೇತೃತ್ವದ ಪೊಲೀಸರ ತಂಡದ ಈ ಶ್ಲಾಘನೀಯ ಕಾರ್ಯಾಚರಣೆಗೆ ಉನ್ನತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
#MudalagiPolice #BelagaviCrime #MoneyDoublingScam #RobberyCase #SPRamarajan #UdayakalaNews #KarnatakaNews

